ರಣಜಿ ಕ್ರಿಕೆಟ್ | ಕರ್ನಾಟಕ ಎದುರು ಸೋಲೊಪ್ಪಿಕೊಳ್ಳದ ಗೋವಾ; ಪಂದ್ಯ ಡ್ರಾ ಪಣಜಿ: ಅಂತಿಮ ದಿನ ಛಲದ ಆಟವಾಡಿದ ಗೋವಾ ಬ್ಯಾಟರ್‌ಗಳು ಕರ್ನಾಟಕಕ್ಕೆ ಗೆಲುವು ನಿರಾಕರಿಸಿದರು. ಜಿಸಿಎಎ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಕರ್ನಾಟಕದ ಮೊದಲ ಇನಿಂಗ್ಸ್‌ ಮೊತ್ತ 603 ರನ್‌ಗಳಿಗೆ ಉತ್ತರವಾಗಿ ಗೋವಾ ಮೊದಲ ಇನಿಂಗ್ಸ್‌ನಲ್ಲಿ 373 ರನ್‌ಗಳಿಗೆ ಆಲೌಟಾಯಿತು. 8 ವಿಕೆಟ್‌ಗಳಿಗೆ 321 ರನ್‌ಗಳಿಂದ ಅಂತಿಮ ದಿನವಾದ ಶುಕ್ರವಾರ ಆಟ ಮುಂದುವರಿಸಿದ ಗೋವಾ ಮತ್ತೆ 52 ರನ್‌ಗಳನ್ನು ಸೇರಿಸಿತು. ದರ್ಶನ್‌ ಮಿಸಾಳ್‌ 95 ರನ್‌ ಕಲೆಹಾಕಿದರು. ಪಂದ್ಯ ಗೆದ್ದು ಪೂರ್ಣ ಪಾಯಿಂಟ್ಸ್‌ ಗಳಿಸುವ ಉದ್ದೇಶದಿಂದ ಕರ್ನಾಟಕ ತಂಡದ ನಾಯಕ ಮಯಂಕ್‌ ಅಗರವಾಲ್‌ ಅವರು ಗೋವಾಕ್ಕೆ ಫಾಲೋಆನ್‌ ನೀಡಿದರು. ಆದರೆ ಎರಡನೇ ಇನಿಂಗ್ಸ್‌ನಲ್ಲೂ ಆತಿಥೇಯ ಬ್ಯಾಟರ್‌ಗಳು ಶಿಸ್ತಿನ ಆಟವಾಡಿದರು. ಪಂದ್ಯ ಡ್ರಾದಲ್ಲಿ ಕೊನೆಗೊಂಡಾಗ ಗೋವಾ 45 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 150 ರನ್‌ ಗಳಿಸಿತ್ತು. ಮೊದಲ ಇನಿಂಗ್ಸ್‌ನಲ್ಲಿ 87 ರನ್‌ ಗಳಿಸಿದ್ದ ಸುಯಶ್‌ ಪ್ರಭುದೇಸಾಯಿ ಎರಡನೇ ಇನಿಂಗ್ಸ್‌ನಲ್ಲೂ ಕರ್ನಾಟಕವನ್ನು ಕಾಡಿದರಲ್ಲದೆ, ಅಜೇಯ 61 ರನ್‌ ಗಳಿಸಿದರು. ಸಂಕ್ಷಿಪ್ತ ಸ್ಕೋರ್‌ ಮೊದಲ ಇನಿಂಗ್ಸ್‌ ಕರ್ನಾಟಕ: 7 ವಿಕೆಟ್‌ ಗಳಿಗೆ 603 ಡಿಕ್ಲೇರ್ಡ್‌. ಗೋವಾ:121.5 ಓವರ್‌ಗಳಲ್ಲಿ 373. ಎರಡನೇ ಇನಿಂಗ್ಸ್‌ ಗೋವಾ: 45 ಓವರ್‌ ಗಳಲ್ಲಿ 3 ವಿಕೆಟ್‌ಗಳಿಗೆ 150 (ಅಮೋಘ್‌ ದೇಸಾಯಿ 25, ಸುಮೀರನ್ ಆಮೋಣಕರ್ 26, ಸುಯಶ್ ಔಟಾಗದೆ 61, ಸ್ನೇಹಲ್‌ ಕೌತಣಕರ 21, ದರ್ಶನ್‌ ಮಿಸಾಳ್‌ ಔಟಾಗದೆ 10, ವಿಜಯಕುಮಾರ್ ವೈಶಾಖ್‌ 12ಕ್ಕೆ 1, ಕೆ.ಗೌತಮ್‌ 35ಕ್ಕೆ 1) ಫಲಿತಾಂಶ: ಪಂದ್ಯ ಡ್ರಾ, ಕರ್ನಾಟಕಕ್ಕೆ 3, ಗೋವಾಕ್ಕೆ 1 ಪಾಯಿಂಟ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.