ಡೆಲ್ಲಿ ಕ್ಯಾಪಿಟಲ್ಸ್‌ ನಿರ್ದೇಶಕರಾಗಲಿರುವ ಸೌರವ್‌ ಗಂಗೂಲಿ ನವದೆಹಲಿ: ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್‌ ಗಂಗೂಲಿ ಅವರು ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್‌ನ ನಿರ್ದೇಶಕರಾಗಿ ನೇಮಕಗೊಳ್ಳುತ್ತಿರುವುದು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಅಕ್ಟೋಬರ್‌ ತಿಂಗಳಲ್ಲಿ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಗಂಗೂಲಿ ಬಿಸಿಸಿಐನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಐಎಲ್ ಟಿ ದುಬೈ ಕ್ಯಾಪಿಟಲ್ಸ್ ಮತ್ತು ಎಸ್ಎ ಟಿ20 ಲೀಗ್‌ನ ಪ್ರಿಟೊರಿಯಾ ಕ್ಯಾಪಿಟಲ್ಸ್‌ ತಂಡದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಲಿದ್ದಾರೆ. 'ಹೌದು, ಸೌರವ್‌ ಅವರು ಈ ವರ್ಷದಿಂದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಲಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದ ಮಾತುಕತೆಗಳು ಮತ್ತು ನೇಮಕ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಐಪಿಎಲ್‌ ಜೊತೆ ಕೆಲಸ ಮಾಡಿದರೆ ಅದು ಡೆಲ್ಲಿ ಕ್ಯಾಪಿಟಲ್ಸ್‌ ಜೊತೆಗೇ ಆಗಿರುತ್ತದೆ' ಎಂದು ಐಪಿಎಲ್‌ನ ಮೂಲವೊಂದು ಪಿಟಿಐಗೆ ತಿಳಿಸಿದ್ದಾಗಿ ವರದಿಯಾಗಿದೆ. 2019ರಲ್ಲಿ ಗಂಗೂಲಿ ಅವರು ಡೆಲ್ಲಿ ಕ್ಯಾಪಿಟಲ್ಸ್‌ನ ಮೆಂಟರ್‌ ಆಗಿ ಕಾರ್ಯ ನಿರ್ವಹಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.