ಮಹಿಳಾ ಟಿ20 ಕ್ರಿಕೆಟ್ ಫೈನಲ್: ಭಾರತ ವನಿತೆಯರಿಗೆ ಚಿನ್ನದ ಮೇಲೆ ಕಣ್ಣು ಹಾಂಗ್‌ಝೌ (ಪಿಟಿಐ): ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಿನ್ನದ ಕಾಣಿಕೆ ನೀಡುವ ಛಲದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವಿದೆ. ಭಾನುವಾರ ನಡೆದ ಮಹಿಳಾ ಟಿ20 ಕ್ರಿಕೆಟ್‌ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ಎದುರು 8 ವಿಕೆಟ್‌ಗಳಿಂದ ಸುಲಭ ಜಯ ಸಾಧಿಸಿದ ತಂಡವು ಫೈನಲ್‌ಗೆ ಲಗ್ಗೆ ಇಟ್ಟಿತು. ಸೋಮವಾರ ನಡೆಯುವ ಅಂತಿಮ ಹಣಾಹಣಿಯಲ್ಲಿ ಭಾರತ ತಂಡವು ಶ್ರೀಲಂಕಾ ಎದುರು ಕಣಕ್ಕಿಳಿಯಲಿದೆ. ಟಾಸ್ ಗೆದ್ದ ಬಾಂಗ್ಲಾದೇಶ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಭಾರತದ ಬೌಲರ್ ಪೂಜಾ ವಸ್ತ್ರಕರ್ (17ಕ್ಕೆ4) ಅವರ ದಾಳಿಗೆ ತತ್ತರಿಸಿದ ತಂಡವು 17.5 ಓವರ್‌ಗಳಲ್ಲಿ 51 ರನ್‌ ಗಳಿಸಿ ಆಲೌಟ್ ಆಯಿತು. ಟಿ20 ಮಾದರಿಯಲ್ಲಿ ಇದು ಬಾಂಗ್ಲಾದ ಅತ್ಯಂತ ಕನಿಷ್ಠ ಮೊತ್ತವಾಗಿದೆ. ಭಾರತ ತಂಡವು ಚೀನಾಕ್ಕೆ ಹೊರಡುವ ಕೆಲಹೊತ್ತಿನ ಮುಂಚೆಯಷ್ಟೇ ಪೂಜಾ ಆಯ್ಕೆಯಾಗಿದ್ದರು. ಅಂಜಲಿ ಶ್ರಾವಣಿ ಅವರ ಬದಲು ತಂಡದಲ್ಲಿ ಸ್ಥಾನ ಪಡೆದಿದ್ದ ಪೂಜಾ ನಾಲ್ಕರ ಘಟ್ಟದಲ್ಲಿ ಮಿಂಚಿದರು. ಇನ್ನೊಂದು ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಪಾಕಿಸ್ತಾನ ತಂಡವನ್ನು ಶ್ರೀಲಂಕಾ 6 ವಿಕೆಟ್‌ಗಳಿಂದ ಪರಾಭವಗೊಳಿಸಿತು. ಪಾಕ್ ತಂಡವು 2014ರ ಇಂಚೆನ್ ಏಷ್ಯನ್ ಕೂಟದಲ್ಲಿ ಚಿನ್ನ ಗೆದ್ದಿತ್ತು. ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ: 17.5 ಓವರ್‌ಗಳಲ್ಲಿ 51 (ನಿಜರ್ ಸುಲ್ತಾನ 12, ಪೂಜಾ ವಸ್ತ್ರಕರ್ 17ಕ್ಕೆ4) ಭಾರತ: 8.2 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 52 (ಜಿಮಿಮಾ ರಾಡ್ರಿಗಸ್ ಔಟಾಗದೆ 20, ಶೆಫಾಲಿ ವರ್ಮಾ 17, ಮೆರೂಫಾ ಅಖ್ತರ್ 13ಕ್ಕೆ1) ಫಲಿತಾಂಶ: ಭಾರತ ಮಹಿಳಾ ತಂಡಕ್ಕೆ 8 ವಿಕೆಟ್‌ಗಳ ಜಯ. ಪಾಕಿಸ್ತಾನ: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 75 (ಶಾವಲ್ ಜುಲ್ಫಿಕರ್ 16, ಒಮೈಮಾ ಸೊಹೈಲ್ 10, ಮುನೀಬಾ ಅಲಿ 13, ಉದೇಶಿಕಾ ಪ್ರಬೋಧಿನಿ 21ಕ್ಕೆ3, ಕವೀಶ ದಿಲ್ಹರಿ 15ಕ್ಕೆ2) ಶ್ರೀಲಂಕಾ: 16.3 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 77 (ಚಾಮರಿ ಆಟಪಟ್ಟು 14, ಅನುಷ್ಕಾ ಸಂಜೀವನಿ 15, ಹರ್ಷಿತಾ ಸಮರವಿಕ್ರಂ 23, ನೀಲಾಕ್ಷಿ ಡಿಸಿಲ್ವಾ ಔಟಾಗದೆ 18, ಸಾದಿಯಾ ಇಕ್ಬಾಲ್ 13ಕ್ಕೆ1, ಡಯಾನಾ ಬೇಗ್ 16ಕ್ಕೆ1) ಫಲಿತಾಂಶ: ಶ್ರೀಲಂಕಾ ತಂಡಕ್ಕೆ 6 ವಿಕೆಟ್‌ಗಳ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.