ಜೈದೇವ್ ಉನದ್ಕತ್ ದಾಖಲೆ: ದೆಹಲಿ ದೂಳೀಪಟ ರಾಜ್‌ಕೋಟ್: ಎಡಗೈ ಮಧ್ಯಮವೇಗಿ ಜೈದೇವ್ ಉನದ್ಕತ್ ರಣಜಿ ಕ್ರಿಕೆಟ್ ಟೂರ್ನಿಯ ಪಂದ್ಯದ ಮೊದಲ ಇನಿಂಗ್ಸ್‌ನ ಪ್ರಥಮ ಓವರ್‌ನಲ್ಲಿಯೇ ಹ್ಯಾಟ್ರಿಕ್ ಗಳಿಸಿ ದಾಖಲೆ ಬರೆದರು. ಈಚೆಗೆ ಬಾಂಗ್ಲಾ ಎದುರಿನ ಟೆಸ್ಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಜೈದೇವ್ (39ಕ್ಕೆ8) ಅವರ ಅಮೋಘ ಬೌಲಿಂಗ್‌ನಿಂದ ಸೌರಾಷ್ಟ್ರ ತಂಡವು ಇಲ್ಲಿ ಮಂಗಳವಾರ ಆರಂಭವಾದ ಬಿ ಗುಂಪಿನ ಪಂದ್ಯದಲ್ಲಿ ದೆಹಲಿ ವಿರುದ್ಧದ ರಣಜಿ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿತು. ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ದೆಹಲಿ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆತಿಥೇಯ ತಂಡದ ನಾಯಕ ಜೈದೇವ್ ಮೊದಲ ಓವರ್‌ನಲ್ಲಿ ದೆಹಲಿಯ ಧ್ರುವ್ ಶೋರೆ (0.3), ವೈಭವ್ ರಾವಳ್ (0.4) ಮತ್ತು ನಾಯಕ ಯಶ್ ಧುಳ್ (0.5) ಅವರ ವಿಕೆಟ್‌ ಗಳಿಸಿದರು. ಈ ಗಾಯದ ಮೇಲೆ ಎರಡನೇ ಓವರ್‌ನಲ್ಲಿ ಚಿರಾಗ್ ಜಾನಿ ಬರೆ ಹಾಕಿದರು. ಆಯುಷ್ ಬದೋನಿ ವಿಕೆಟ್ ಗಳಿಸಿದರು. ಇದರಿಂದಾಗಿ ಅಗ್ರ ನಾಲ್ವರು ಬ್ಯಾಟರ್‌ಗಳು ಖಾತೆಯನ್ನೇ ತೆರೆಯಲಿಲ್ಲ. ತಮ್ಮ ಎರಡನೇ ಓವರ್‌ನಲ್ಲಿ ಜೈದೇವ್ ಜಾಂಟಿ ಸಿಧು ಹಾಗೂ ಲಲಿತ್ ಯಾದವ್ ವಿಕೆಟ್ ಕೂಡ ಕಬಳಿಸಿದರು. ಇನ್ನೊಂದು ಓವರ್‌ನಲ್ಲಿ ಲಕ್ಷ್ಯ ವಿಕೆಟ್ ಕೂಡ ಅವರ ಪಾಲಾಯಿತು. ದೆಹಲಿ ತಂಡವು 10 ರನ್‌ಗಳಿಗೆ ಏಳು ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಜೊತೆಗೂಡಿದ ಹೃತಿಕ್ ಶೋಕೀನ್ (ಔಟಾಗದೇ 68; 90ಎ) ಮತ್ತು ಶಿವಾಂಕ್ ವಸಿಷ್ಠ (38; 68ಎ) ಒಂಬತ್ತನೇ ವಿಕೆಟ್ ಜೊತೆಯಾಟದಲ್ಲಿ 80 ರನ್ ಸೇರಿಸಿ ತಂಡವು ಅತ್ಯಲ್ಪ ಮೊತ್ತಕ್ಕೆ ಕುಸಿಯುವುದನ್ನು ತಡೆದರು. ಇದರಿಂದಾಗಿ ತಂಡವು 133 ರನ್‌ಗಳಿಗೆ ತಂಡವು ಆಲೌಟ್ ಆಯಿತು. ಮೊದಲ ಇನಿಂಗ್ಸ್ ಆರಂಭಿಸಿದ ಸೌರಾಷ್ಟ್ರ ತಂಡವು ಹರ್ವಿಕ್ ದೇಸಾಯಿ (ಬ್ಯಾಟಿಂಗ್ 104) ಶತಕದ ಬಲದಿಂದ ದಿನದಾಟದ ಅಂತ್ಯಕ್ಕೆ 46 ಓವರ್‌ಗಳಲ್ಲಿ 1 ವಿಕೆಟ್‌ಗೆ 184 ರನ್ ಗಳಿಸಿತು. 51 ರನ್‌ಗಳ ಮುನ್ನಡೆ ಸಾಧಿಸಿತು. ಸಂಕ್ಷಿಪ್ತ ಸ್ಕೋರು: ಬಿ ಗುಂಪು: ರಾಜ್‌ಕೋಟ್: ಮೊದಲ ಇನಿಂಗ್ಸ್: ದೆಹಲಿ: 35 ಓವರ್‌ಗಳಲ್ಲಿ 133 (ಹೃತಿಕ್ ಶೋಕೀನ್ ಔಟಾಗದೆ 68, ಶಿವಾಂಕ್ ವಸಿಷ್ಠ 38, ಜೈದೇವ್ ಉನದ್ಕತ್ 39ಕ್ಕೆ8) ಸೌರಾಷ್ಟ್ರ:46 ಓವರ್‌ಗಳಲ್ಲಿ 1 ವಿಕೆಟ್‌ಗಳಿಗೆ 184 (ಹರ್ವಿಕ್ ದೇಸಾಯಿ ಬ್ಯಾಟಿಂಗ್ 104, ಜೈ ಗೋಹಿಲ್ 34, ಚಿರಾಗ್ ಜಾನಿ ಬ್ಯಾಟಿಂಗ್ 44) ಬ್ರೆಬೊರ್ನ್ ಕ್ರೀಡಾಂಗಣ ಮುಂಬೈ: ತಮಿಳುನಾಡು: 36.2 ಓವರ್‌ಗಳಲ್ಲಿ 144 (ಪ್ರದೋಷ್ ಪಾಲ್ 55, ಜಗದೀಶನ್ 23, ತುಷಾರ್ ದೇಶಪಾಂಡೆ 37ಕ್ಕೆ5, ಶಮ್ಸ್ ಮುಲಾನಿ 33ಕ್ಕೆ3) ಮುಂಬೈ: 41 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 183 (ಪೃಥ್ವಿ ಶಾ 35, ಅಜಿಂಕ್ಯ ರಹಾನೆ 42, ಸರ್ಫರಾಜ್ ಖಾನ್ ಬ್ಯಾಟಿಂಗ್ 46, ಶಮ್ಸ್ ಮಲಾನಿ 28, ತ್ರಿಲೋಕ್ ನಾಗ್ 58ಕ್ಕೆ2, ಅಶ್ವಿನ್ ಕ್ರಿಸ್ಟ್ 32ಕ್ಕೆ3) ಸಿ ಗುಂಪು(ದೆಹಲಿ); ಪುದುಚೇರಿ: 62.4 ಓವರ್‌ಗಳಲ್ಲಿ 216 (ಪಾರಸ್ ಡೋಗ್ರಾ 38, ದಾಮೋದರನ್ ರೋಹಿತ್ 31, ಅರುಣ್ ಕಾರ್ತಿಕ್ 58, ಅಂಕಿತ್ ಶರ್ಮಾ 30, ದಿವೇಶ್ ಪಠಾಣಿಯಾ 39ಕ್ಕೆ3, ಪೂನಂ ಪೂನಿಯಾ 48ಕ್ಕೆ3, ಅರ್ಪಿತ್ ಗುಲೇರಿಯಾ 67ಕ್ಕೆ2, ಪುಳಕಿತ್ ನಾರಂಗ್ 28ಕ್ಕೆ2) ಸರ್ವಿಸಸ್: 15 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 64 (ರವಿ ಚೌಹಾಣ್ ಬ್ಯಾಟಿಂಗ್ 23, ರಾಹುಲ್ ಸಿಂಗ್ ಬ್ಯಾಟಿಂಗ್ 40) (ಜೈಪುರ): ಜಾರ್ಖಂಡ್: 47 ಓವರ್‌ಗಳಲ್ಲಿ 92 (ಆರ್ಯಮನ್ ಸೇನ್ 38, ಅನಿಕೇತ್ ಚೌಧರಿ 16ಕ್ಕೆ4, ತನ್ವೀರ್ ಉಲ್ ಹಕ್ 42ಕ್ಕೆ4, ಋತುರಾಜ್ ಸಿಂಗ್ 21ಕ್ಕೆ2) ರಾಜಸ್ಥಾನ್: 31 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 101 (ಯಶ್ ಕೊಠಾರಿ 52, ಆಶಿಶ್ ಕುಮಾರ್ 26ಕ್ಕೆ4) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.