ನ್ಯೂಜಿಲೆಂಡ್‌– ಪಾಕ್‌ ಎರಡನೇ ಟೆಸ್ಟ್: ಡೆವೊನ್‌ ಕಾನ್ವೆ ಶತಕ ಕರಾಚಿ: ಡೆವೊನ್‌ ಕಾನ್ವೆ ಸೊಗಸಾದ ಶತಕ ಗಳಿಸಿದರು. ಅವರ ಆಟದ ಬಲದಿಂದ ನ್ಯೂಜಿಲೆಂಡ್‌ ತಂಡವು ಆತಿಥೇಯ ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆರು ವಿಕೆಟ್‌ ಕಳೆದುಕೊಂಡು 309 ರನ್‌ ಗಳಿಸಿದೆ. ಕರಾಚಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದ ನ್ಯೂಜಿಲೆಂಡ್‌ ನಾಯಕ ಟಿಮ್ ಸೌಥಿ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರು. ಅವರ ನಿರ್ಧಾರವನ್ನು ಸಮರ್ಥಿಸಿಕೊಂಡ ಆರಂಭಿಕ ಆಟಗಾರರಾದ ಟಾಮ್ ಲಥಾಮ್‌ (71) ಮತ್ತು ಕಾನ್ವೆ ಮೊದಲ ವಿಕೆಟ್‌ ಜೊತೆಯಾಟದಲ್ಲಿ 134 ರನ್‌ ಸೇರಿಸಿದರು. ಸೋಮವಾರ ಮೊದಲ ದಿನದಾಟದ ಅಂತ್ಯಕ್ಕೆ ಟಾಮ್ ಬ್ಲಂಡೆಲ್‌ (30) ಮತ್ತು ಇಶ್ ಸೋಧಿ (11) ಕ್ರೀಸ್‌ನಲ್ಲಿದ್ದರು. ಲಥಾಮ್‌ ಔಟಾದ ಬಳಿಕ ಕ್ರೀಸ್‌ಗಿಳಿದ ಕೇನ್ ವಿಲಿಯಮ್ಸನ್ (36) ಅವರೊಂದಿಗೆ ಕಾನ್ವೆ 100 ರನ್‌ ಪೇರಿಸಿದರು. 191 ಎಸೆತ ಎದುರಿಸಿದ ಕಾನ್ವೆ ಅವರ ಇನಿಂಗ್ಸ್‌ನಲ್ಲಿ 16 ಬೌಂಡರಿ ಮತ್ತು ಒಂದು ಸಿಕ್ಸರ್ ಇತ್ತು. ಕಾನ್ವೆ ಅವರು ಆಫ್‌ಸ್ಪಿನ್ನರ್ ಆಘಾ ಸಲ್ಮಾನ್‌ (55ಕ್ಕೆ 3) ಅವರಿಗೆ ವಿಕೆಟ್‌ ಒಪ‍್ಪಿಸಿದ ಬಳಿಕ ಕಿವೀಸ್‌ ತಂಡ ಕುಸಿತದ ಹಾದಿ ಹಿಡಿಯಿತು. ಪಾಕಿಸ್ತಾನದ ಪರ ನಸೀಂ ಶಾ (44ಕ್ಕೆ 2) ಕೂಡ ಬೌಲಿಂಗ್‌ನಲ್ಲಿ ಮಿಂಚಿದರು. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ನ್ಯೂಜಿಲೆಂಡ್‌ 90 ಓವರ್‌ಗಳಲ್ಲಿ ಆರು ವಿಕೆಟ್‌ಗೆ 309 (ಟಾಮ್ ಲಥಾಮ್‌ 71, ಡೆವೊನ್ ಕಾನ್ವೆ 122, ಕೇನ್ ವಿಲಿಯಮ್ಸನ್‌ 36, ಹೆನ್ರಿ ನಿಕೊಲ್ಸ್ 26, ಟಾಮ್ ಬ್ಲಂಡೆಲ್‌ ಬ್ಯಾಟಿಂಗ್‌ 30; ನಸೀಂ ಶಾ 44ಕ್ಕೆ 2, ಅಬ್ರಾರ್ ಅಹಮದ್‌ 101ಕ್ಕೆ 1, ಆಘಾ ಸಲ್ಮಾನ್‌ 55ಕ್ಕೆ 3). ಪಾಕಿಸ್ತಾನ ಎದುರಿನ ಪಂದ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.