ಐಪಿಎಲ್‌ಗೆ ಲಭ್ಯ: ಗ್ರೀನ್‌ ಸಿಡ್ನಿ (ಪಿಟಿಐ): ಈ ಬಾರಿಯ ಐಪಿಎಲ್‌ನಲ್ಲಿ ಆಡಲು ತಾನು ಲಭ್ಯವಿರುವುದಾಗಿ ಆಸ್ಟ್ರೇಲಿಯಾದ ಆಲ್‌ರೌಂಡರ್‌ ಕ್ಯಾಮರಾನ್‌ ಗ್ರೀನ್‌ ಸ್ಪಷ್ಟಪಡಿಸಿದ್ದಾರೆ. ಐಪಿಎಲ್‌ ಟೂರ್ನಿಯ ಆರಂಭದ ಕೆಲವು ಪಂದ್ಯಗಳಲ್ಲಿ ಗ್ರೀನ್‌ ಬೌಲಿಂಗ್‌ ಮಾಡುವುದಿಲ್ಲ. ಬ್ಯಾಟರ್‌ನ ಜವಾಬ್ದಾರಿ ಮಾತ್ರ ನಿಭಾಯಿಸಲಿದ್ದಾರೆ ಎಂದು ವರದಿಯಾಗಿತ್ತು. ‘ಅಂತಹ ವರದಿಗಳು ಕೇವಲ ಊಹಾಪೋಹ ಮಾತ್ರ’ ಎಂದು ಗ್ರೀನ್‌ ತಳ್ಳಿಹಾಕಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದ ವೇಳೆ ಗ್ರೀನ್‌ ಗಾಯಗೊಂಡಿದ್ದರು. ಎನ್ರಿಚ್‌ ನಾರ್ಕಿಯಾ ಅವರ ಬೌಲಿಂಗ್‌ನಲ್ಲಿ ಚೆಂಡು ಗ್ರೀನ್‌ ಕೈಬೆರಳಿಗೆ ಬಡಿದಿತ್ತು. ಇದರಿಂದ ಮೂರನೇ ಟೆಸ್ಟ್‌ನಲ್ಲಿ ಅವರು ಆಡುತ್ತಿಲ್ಲ. ಗ್ರೀನ್‌ ಅವರನ್ನು ಮಿನಿ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್‌ ತಂಡ ₹ 17.50 ಕೋಟಿ ನೀಡಿ ತನ್ನದಾಗಿಸಿಕೊಂಡಿತ್ತು. ‘ಕಳೆದ ಕೆಲ ದಿನಗಳಿಂದ ಅಂತಹ ಸುದ್ದಿ ಹರಿದಾಡುತ್ತಿದೆ. ಅದು ಎಲ್ಲಿಂದ ಬಂತು ಎಂಬುದು ನನಗೂ ಗೊತ್ತಿಲ್ಲ. ಐಪಿಎಲ್‌ನಲ್ಲಿ ಆಡಲು ನಾನು ಶೇ 100 ರಷ್ಟು ಲಭ್ಯ’ ಎಂದು ಗ್ರೀನ್‌ ಹೇಳಿದ್ದಾರೆ. ಫೆ.9 ರಂದು ಆರಂಭವಾಗುವ ಬಾರ್ಡರ್‌– ಗಾವಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ವೇಳೆಗೆ ಫಿಟ್‌ನೆಸ್‌ ಮರಳಿ ಪಡೆಯುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ‘ಐಪಿಎಲ್‌ಗೂ ಮುನ್ನ ಭಾರತ ವಿರುದ್ಧದ ಟೆಸ್ಟ್‌ ಸರಣಿ ನಡೆಯಲಿದೆ. ಅಲ್ಲಿ ಆಡುವುದು ನನ್ನ ಮೊದಲ ಆದ್ಯತೆ’ ಎಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.