ಕ್ರಿಕೆಟ್‌: ಸೆಪ್ಟೆಂಬರ್‌ನಲ್ಲಿ ಏಷ್ಯಾಕಪ್‌ ಟೂರ್ನಿ ನವದೆಹಲಿ: ಏಷ್ಯಾಕಪ್ ಕ್ರಿಕೆಟ್‌ ಟೂರ್ನಿ ಈ ಬಾರಿ 50 ಓವರ್‌ಗಳ ಮಾದರಿಯಲ್ಲಿ ನಡೆಯಲಿದ್ದು, ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ಆಯೋಜಿಸಲಾಗುವುದು ಎಂದು ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ (ಎಸಿಸಿ) ಹೇಳಿದೆ. ಆದರೆ ಟೂರ್ನಿಯ ವೇಳಾಪಟ್ಟಿ ಮತ್ತು ಆತಿಥ್ಯ ವಹಿಸುವ ದೇಶದ ಬಗ್ಗೆ ಎಸಿಸಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಈ ಬಾರಿಯ ಟೂರ್ನಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಬೇಕು. ಆದರೆ ಪಾಕ್‌ನಲ್ಲಿ ಟೂರ್ನಿ ನಡೆಸಿದರೆ, ತಮ್ಮ ತಂಡವನ್ನು ಕಳುಹಿಸುವುದಿಲ್ಲ ಎಂದು ಬಿಸಿಸಿಐ ಹೇಳಿದೆ. ಬಿಸಿಸಿಐ ನಿಲುವನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ (ಪಿಸಿಬಿ) ಮಾಜಿ ಮುಖ್ಯಸ್ಥ ರಮೀಜ್‌ ರಾಜಾ ಟೀಕಿಸಿದ್ದರು. ಮಾತ್ರವಲ್ಲ, ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್‌ ಟೂರ್ನಿಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದರು. ಆದರೆ ಇದೀಗ ಪಿಸಿಬಿ ಆಡಳಿತದಲ್ಲಿ ಬದಲಾವಣೆಯಾಗಿದೆ. ರಮೀಜ್‌ ಅವರನ್ನು ವಜಾಗೊಳಿಸಿ, ನಜಮ್‌ ಸೇಠಿ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಇದರಿಂದ ಪಿಸಿಬಿಯ ಕಠಿಣ ನಿಲುವು ಬದಲಾಗಬಹುದು ಎಂದು ಎಸಿಸಿ ನಿರೀಕ್ಷಿಸಿದೆ. ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಗಾನಿಸ್ತಾನ ಮತ್ತು ಅರ್ಹತಾ ಹಂತದಲ್ಲಿ ಗೆದ್ದು ಬರುವ ಒಂದು ತಂಡ ಒಳಗೊಂಡಂತೆ ಒಟ್ಟು ಆರು ತಂಡಗಳು ಪಾಲ್ಗೊಳ್ಳಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.