ರಣಜಿ ಸೋಲು: ದೆಹಲಿ ಆಯ್ಕೆ ಸಮಿತಿ ವಜಾ ನವದೆಹಲಿ: ದೆಹಲಿ ಕ್ರಿಕೆಟ್ ತಂಡವು ಸೌರಾಷ್ಟ್ರ ಎದುರಿನ ರಣಜಿ ಪಂದ್ಯದಲ್ಲಿ ಹೀನಾಯವಾಗಿ ಸೋತಿದ್ದರಿಂದ ಸೀನಿಯರ್ ತಂಡದ ಆಯ್ಕೆ ಸಮಿತಿಯನ್ನು ಡಿಡಿಸಿಎ ವಜಾ ಮಾಡಿದೆ. ಭಾರತ ತಂಡದ ಮಾಜಿ ಆಟಗಾರ ಗಗನ್ ಖೋಡಾ, ಮಯಂಕ್ ಸಿದಾನಾ ಮತ್ತು ಅನಿಲ್ ಭಾರದ್ವಾಜ್ ಅವರು ಈ ಸಮಿತಿಯಲ್ಲಿದ್ದರು. ರಾಜ್‌ಕೋಟ್‌ನಲ್ಲಿ ನಡೆದ ಸೌರಾಷ್ಟ್ರದ ವಿರುದ್ಧದ ಪಂದ್ಯದಲ್ಲಿ ದೆಹಲಿ ತಂಡವು ಇನಿಂಗ್ಸ್ ಮತ್ತು 214 ರನ್‌ಗಳಿಂದ ಸೋತಿತು. ಮೊದಲ ಇನಿಂಗ್ಸ್‌ನಲ್ಲಿ ಕೇವಲ 10 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು. ಬುಧವಾರ ರಾಜ್‌ಕೋಟ್‌ನ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ತಂಡದ ಆಯ್ಕೆಯ ಕುರಿತು ಸದಸ್ಯರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಆಗ ಸಿದಾನಾ ಸಭಾತ್ಯಾಗ ಮಾಡಿದ್ದರೆನ್ನಲಾಗಿದೆ. ಈ ಕುರಿತು ಅಪೆಕ್ಸ್‌ ಕೌನ್ಸಿಲ್‌ಗೆ ಡಿಡಿಸಿಎ ಅಧ್ಯಕ್ಷ ರೋಹನ್ ಜೇಟ್ಲಿ ಇಮೇಲ್ ರವಾನಿಸಿದ್ದಾರೆ. ಕಟುವಾದ ಪದಗಳಲ್ಲಿ ಆಯ್ಕೆ ಸಮಿತಿಯ ಕಾರ್ಯವೈಖರಿಯನ್ನು ವಿವರಿಸಿದ್ದಾರೆ. ಪ್ರತಿ ಪಂದ್ಯದ ಸಂದರ್ಭದಲ್ಲಿಯೂ 22 ಆಟಗಾರರ ತಂಡವನ್ನು ಆಯ್ಕೆ ಮಾಡುತ್ತಿದ್ದ ಗಗನ್ ಖೋಡಾ ಅವರ ಕ್ರಮವನ್ನು ಜೇಟ್ಲಿ ಆಕ್ಷೇಪಿಸಿದ್ದಾರೆ. ‘ಡಿಡಿಸಿಎ ಪುರುಷರ ತಂಡದ ಆಯ್ಕೆ ಸಮಿತಿಯ ಕಾರ್ಯವೈಖರಿಯು ಸಮರ್ಪಕವಾಗಿ ಎಂಬುದನ್ನು ಈ ಮೂಲಕ ಖಚಿತಪಡಿಸುತ್ತೇನೆ. ಈ ಮಾತಿಗೆ ಬದ್ಧನೂ ಆಗಿದ್ದೇನೆ. ಯಾವುದೇ ಧ್ಯೇಯ ಅಥವಾ ದೂರದೃಷ್ಟಿ ಕೋನವೇ ಇಲ್ಲದ ಕಾರ್ಯವೈಖರಿ ಅವರದ್ದಾಗಿದೆ’ ಎಂದು ಜೇಟ್ಲಿ ಬರೆದಿದ್ದಾರೆ. ಗಾಯಗೊಂಡ ಆಟಗಾರ ಬದಲಿಗೆ ಗಾಯಾಳು ಕ್ರಿಕೆಟಿಗನನ್ನೇ ಆಯ್ಕೆ ಮಾಡಿರುವ ಸಂಗತಿಯನ್ನೂ ಅವರು ಉಲ್ಲೇಖಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.