ರಣಜಿ ಕ್ರಿಕೆಟ್: ಮಯಂಕ್ ಪಡೆಗೆ ಅಗ್ರಸ್ಥಾನ ಉಳಿಸಿಕೊಳ್ಳುವ ಛಲ ಬೆಂಗಳೂರು: ಮಯಂಕ್ ಅಗರವಾಲ್ ನಾಯಕತ್ವದ ಬಳಗವು ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ರಾಜಸ್ಥಾನವನ್ನು ಎದುರಿಸಲಿದೆ. ಸದ್ಯ ಸಿ ಗುಂಪಿನ ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿರುವ ಕರ್ನಾಟಕದ ಖಾತೆಯಲ್ಲಿ 19 ಅಂಕಗಳಿವೆ. ಎರಡನೇ ಸ್ಥಾನದಲ್ಲಿರುವ ರಾಜಸ್ಥಾನದ ಬಳಿ 14 ಅಂಕಗಳಿವೆ. ಕ್ವಾರ್ಟರ್‌ಫೈನಲ್ ತಲುಪಬೇಕಾದರೆ ತಂಡವು ತನ್ನ ಮೊದಲ ಸ್ಥಾನವನ್ನು ಕಾಯ್ದುಕೊಳ್ಳುವುದು ಮುಖ್ಯ. ರಾಜಸ್ಥಾನ ಎದುರು ಸೇರಿದಂತೆ ಇನ್ನೂ ಮೂರು ಪಂದ್ಯಗಳನ್ನು ಮಯಂಕ್ ಬಳಗ ಆಡಬೇಕಿದೆ. ವೇಳಾಪಟ್ಟಿಯ ಪ್ರಕಾರ ಕರ್ನಾಟಕ ತಂಡವು ತವರಿನಲ್ಲಿ ಆಡುತ್ತಿರುವ ಕೊನೆಯ ಲೀಗ್ ಪಂದ್ಯ ಇದಾಗಲಿದೆ. ಮುಂದಿನ ಸುತ್ತುಗಳಲ್ಲಿ ಕೇರಳವನ್ನು ತಿರುವನಂತಪುರದಲ್ಲಿ ಮತ್ತು ಜಾರ್ಖಂಡ್ ತಂಡವನ್ನು ರಾಂಚಿಯಲ್ಲಿ ಎದುರಿಸಲಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಎರಡು ಗೆದ್ದು ಎರಡರಲ್ಲಿ ಡ್ರಾ ಮಾಡಿಕೊಂಡಿದೆ. ಇದರಲ್ಲಿ ಮೂರು ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದವು. ಕಳೆದ ಪಂದ್ಯದಲ್ಲಿ ಛತ್ತೀಸಗಢ ತಂಡದ ಕಠಿಣ ಸವಾಲು ಎದುರಿಸುವಲ್ಲಿ ಮಯಂಕ್ ಬಳಗವು ಯಶಸ್ವಿಯಾಯಿತು. ಐದು ವಿಕೆಟ್ ಗೊಂಚಲು ಗಳಿಸಿದ ವೈಶಾಖ ವಿಜಯಕುಮಾರ್ ಮತ್ತು ವಿದ್ವತ್ ಕಾವೇರಪ್ಪ ಅವರ ಆಟ ಪ್ರಮುಖವಾಯಿತು. ಅಲ್ಲದೇ ನಾಯಕ ಮಯಂಕ್ ಅಗರವಾಲ್ ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ ಶತಕ, ಸಮರ್ಥ್ ಅರ್ಧಶತಕ ಹಾಗೂ ಯುವಪ್ರತಿಭೆ ನಿಕಿನ್ ಜೋಸ್ ಎರಡೂ ಇನಿಂಗ್ಸ್‌ಗಳಲ್ಲಿ ತೋರಿದ ದಿಟ್ಟ ಆಟ ಗಮನ ಸೆಳೆದಿತ್ತು. ಆದರೆ, ಅನುಭವಿ ಮನೀಷ್ ಪಾಂಡೆ, ವಿಕೆಟ್‌ಕೀಪರ್ ಬ್ಯಾಟರ್ ಬಿ.ಆರ್. ಶರತ್ ಅವರ ಅಸ್ಥಿರತೆ ಬ್ಯಾಟಿಂಗ್ ವಿಭಾಗದಲ್ಲಿ ಚಿಂತೆಯ ವಿಷಯಗಳಾಗಿವೆ. ಈ ಟೂರ್ನಿಯ ಕಳೆದ ಎಲ್ಲ ಪಂದ್ಯಗಳಲ್ಲಿಯೂ ಬೆಂಚ್ ಕಾದಿರುವ ಕೆ.ವಿ. ಸಿದ್ಧಾರ್ಥ್ ಅವರಿಗೆ ಅವಕಾಶ ಸಿಗುವ ನಿರೀಕ್ಷೆ ಇದೆ. ಇದರಿಂದಾಗಿ ಯುವ ಆಟಗಾರ ವಿಶಾಲ್ ಒಣತ್ ವಿಶ್ರಾಂತಿ ಪಡೆಯಬಹುದು. ಇಲ್ಲಿಯವರೆಗೆ ಎದುರಿಸಿದ ತಂಡಗಳಿಗಿಂತ ರಾಜಸ್ಥಾನ ತುಸು ಬಲಿಷ್ಠವಾಗಿದೆ. ಅಶೋಕ್ ಮನೇರಿಯಾ ಬಳಗವು ಆಡಿರುವ ನಾಲ್ಕು ಪಂದ್ಯಗಳಲ್ಲಿ ಒಂದರಲ್ಲಿ ಜಯಿಸಿ, ಮೂರರಲ್ಲಿ ಡ್ರಾ ಮಾಡಿಕೊಂಡಿದೆ. ಬ್ಯಾಟಿಂಗ್ ವಿಭಾಗದಲ್ಲಿ ಯಶ್ ಕೊಠಾರಿ ಉತ್ತಮವಾಗಿ ಆಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಜಾರ್ಖಂಡ್ ಎದುರು 18 ವರ್ಷದ ಕರಣ್ ಲಾಬಾ ಶತಕ ಬಾರಿಸಿ ಮಿಂಚಿದ್ದರು. ತಂಡದ ಸ್ಪಿನ್ನರ್‌ಗಳು ಉತ್ತಮವಾಗಿ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಆತಿಥೇಯ ಬ್ಯಾಟರ್‌ಗಳಿಗೆ ಸವಾಲೊಡ್ಡಬಲ್ಲರು. ತಂಡಗಳು ಕರ್ನಾಟಕ: ಮಯಂಕ್ ಅಗರವಾಲ್ (ನಾಯಕ), ಆರ್. ಸಮರ್ಥ್, ನಿಕಿನ್ ಜೋಸ್, ವಿಶಾಲ್ ಒಣತ್, ಮನೀಷ್ ಪಾಂಡೆ, ಬಿ.ಆರ್. ಶರತ್, ಶ್ರೀನಿವಾಸ್ ಶರತ್ (ಇಬ್ಬರೂ ವಿಕೆಟ್‌ಕೀಪರ್), ವಿದ್ವತ್ ಕಾವೇರಪ್ಪ, ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್, ವೈಶಾಖ ವಿಜಯಕುಮಾರ್, ವಿ. ಕೌಶಿಕ್, ಕೆ.ವಿ.ಸಿದ್ಧಾರ್ಥ್, ದೇವದತ್ತ ಪಡಿಕ್ಕಲ್. ರಾಜಸ್ಥಾನ: ಅಶೋಕ್ ಮನೇರಿಯಾ (ನಾಯಕ), ಯಶ್ ಕೊಠಾರಿ, ಅಭಿಜಿತ್ ತೋಮರ್, ಮಹಿಪಾಲ್ ಲೊಮ್ರೊರ್, ಸಲ್ಮಾನ್ ಖಾನ್, ಶುಭಂ ಶರ್ಮಾ, ಕುನಾಲ್ ಸಿಂಗ್ ರಾಥೋಡ್ (ವಿಕೆಟ್‌ಕೀಪರ್), ಋತುರಾಜ್ ಸಿಂಗ್, ಕರಣ್ ಲಾಂಬಾ, ತನವೀರ್ ಉಲ್ ಹಕ್, ಅಂಕಿತ್ ಚೌಧರಿ, ರವಿ ಬಿಷ್ಣೊಯಿ, ಕಮಲೇಶ್ ನಾಗರಕೋಟಿ, ಮಾನವ್ ಸುತಾರ್, ಅರಾಫತ್ ಖಾನ್, ಸಂಪ್ರಿತ್ ಜೋಶಿ. ಪಂದ್ಯ ಆರಂಭ: ಬೆಳಿಗ್ಗೆ 9.30 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.