ರಣಜಿ: ಅಸ್ಸಾಂ ವಿರುದ್ಧ ಮುಂಬೈ ಬೃಹತ್‌ ಮೊತ್ತ- ಪೃಥ್ವಿ ಶಾ ದ್ವಿಶತಕ ಗುವಾಹಟಿ (ಪಿಟಿಐ): ರಾಷ್ಟ್ರೀಯ ತಂಡದಲ್ಲಿ ಮತ್ತೆ ಸ್ಥಾನ ಪಡೆಯುವ ಪ್ರಯತ್ನದಲ್ಲಿರುವ ಪೃಥ್ವಿ ಶಾ ಅವರು ಭರ್ಜರಿ ದ್ವಿಶತಕದ ಮೂಲಕ ಮುಂಚಿದರು. ಗುವಾಹಟಿಯಲ್ಲಿ ನಡೆಯುತ್ತಿರುವ ರಣಜಿ ಕ್ರಿಕೆಟ್‌ ಪಂದ್ಯದ ಮೊದಲ ದಿನವಾದ ಮಂಗಳವಾರ ಅವರು ಅಜೇಯ 240 ರನ್ ಗಳಿಸಿದರು. ಮುಂಬೈ ತಂಡ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 397 ರನ್‌ ಗಳಿಸಿದೆ. 283 ಎಸೆತಗಳನ್ನು ಎದುರಿಸಿದ ಪೃಥ್ವಿ 33 ಬೌಂಡರಿ ಹಾಗೂ ಒಂದು ಸಿಕ್ಸರ್‌ ಹೊಡೆದರು. ಅವರು ಮುಷೀರ್ ಖಾನ್‌ ಜೊತೆ ಮೊದಲ ವಿಕೆಟ್‌ಗೆ 123 ರನ್‌ ಸೇರಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಮುರಿಯದ ಮೂರನೇ ವಿಕೆಟ್‌ಗೆ ಅಜಿಂಕ್ಯ ರಹಾನೆ ಅವರೊಂದಿಗೆ 200 ರನ್ ಸೇರಿಸಿದ್ದಾರೆ. ಪೃಥ್ವಿ ಅವರ 283 ಎಸೆತಗಳ ಇನಿಂಗ್ಸ್‌ನಲ್ಲಿ 153 ಡಾಟ್‌ಬಾಲ್‌ಗಳು ಇದ್ದವು. ಅವರ 240 ರನ್‌ಗಳು ಇನ್ನುಳಿದ 130 ಎಸೆತಗಳಲ್ಲಿ ಬಂದಿವೆ. ಮುಂಬೈನ ಆರಂಭಿಕ ಬ್ಯಾಟರ್‌ ಕಳೆದ 18 ತಿಂಗಳಲ್ಲಿ ಯಾವುದೇ ಮಾದರಿಯಲ್ಲೂ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಈ ಇನಿಂಗ್ಸ್‌ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರು. ಸಂಕ್ಷಿಪ್ತ ಸ್ಕೋರ್‌: ಮುಂಬೈ ಮೊದಲ ಇನಿಂಗ್ಸ್‌ 90 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 372 (ಪೃಥ್ವಿ ಶಾ ಬ್ಯಾಟಿಂಗ್‌ 240, ಮುಷೀರ್‌ ಖಾನ್‌ 42, ಅರ್ಮಾನ್‌ ಜಾಫರ್ 27, ಅಜಿಂಕ್ಯ ರಹಾನೆ ಬ್ಯಾಟಿಂಗ್‌ 73) ಅಸ್ಸಾಂ ವಿರುದ್ದದ ಪಂದ್ಯ ನವದೆಹಲಿ ಪಂದ್ಯ: ಆಂಧ್ರ ಮೊದಲ ಇನಿಂಗ್ಸ್‌ 74 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 203 (ಸಿ.ಆರ್‌.ಜ್ಞಾನೇಶ್ವರ್‌ 81, ಹನುಮ ವಿಹಾರಿ ಬ್ಯಾಟಿಂಗ್‌ 76, ಹೃತಿಕ್‌ ಶೋಕೀನ್‌ 49ಕ್ಕೆ 1) ದೆಹಲಿ ವಿರುದ್ಧದ ಪಂದ್ಯ ಹೈದರಾಬಾದ್‌ ಪಂದ್ಯ: ಹೈದರಾಬಾದ್‌ ಮೊದಲ ಇನಿಂಗ್ಸ್‌ 30.5 ಓವರ್‌ಗಳಲ್ಲಿ 79 (ಜಯದೇವ್‌ ಉನದ್ಕತ್‌ 28ಕ್ಕೆ 3) ಸೌರಾಷ್ಟ್ರ ಮೊದಲ ಇನಿಂಗ್ಸ್‌ 54 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 250 (ಹಾರ್ವಿಕ್‌ ದೇಸಾಯಿ 81, ಚಿರಾಗ್‌ ಜಾನಿ 68, ಅನಿಕೇತ್‌ ರೆಡ್ಡಿ 74ಕ್ಕೆ 3) ಪುಣೆ ಪಂದ್ಯ: ಮಹಾರಾಷ್ಟ್ರ ಮೊದಲ ಇನಿಂಗ್ಸ್‌ 6 ವಿಕೆಟ್‌ಗಳಿಗೆ 350 (ಋತುರಾಜ್‌ ಗಾಯವಾಡ್‌ ಬ್ಯಾಟಿಂಗ್‌ 118, ಕೆ.ಜಾಧವ್‌ 56, ಎಲ್‌.ವಿಘ್ನೇಶ್‌ 80ಕ್ಕೆ 2) ತಮಿಳುನಾಡು ವಿರುದ್ಧದ ಪಂದ್ಯ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.