ವಿಶ್ವಕಪ್ ಕ್ರಿಕೆಟ್‌: ಶ್ವೇತಾ, ಶಫಾಲಿ ಅಬ್ಬರ; ಭಾರತಕ್ಕೆ ಒಲಿದ ಗೆಲುವು ಬೆನೊನಿ: ಆರಂಭಿಕ ಬ್ಯಾಟರ್‌ ಶ್ವೇತಾ ಶೆರಾವತ್ ಅಬ್ಬರದ ಬ್ಯಾಟಿಂಗ್ ಮತ್ತು ನಾಯಕಿ ಶಫಾಲಿ ವರ್ಮಾ ಅವರ ಆಲ್‌ರೌಂಡ್ ಆಟದಿಂದ ಭಾರತದ ಯುವಪಡೆಯು 19 ವರ್ಷದೊಳಗಿನ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಶ್ವೇತಾ (ಔಟಾಗದೆ 92; 57ಎ, 4X20) ಮತ್ತು ಶಫಾಲಿ (45; 16ಎ, 4X9, 6X1 ಹಾಗೂ 31ಕ್ಕೆ2) ನೆರವಿನಿಂದ ಭಾರತ ತಂಡವು ಡಿ ಗುಂಪಿನ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಎದುರು 7 ವಿಕೆಟ್‌ಗಳಿಂದ ಜಯಿಸಿತು. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡವು ಬ್ಯಾಟಿಂಗ್ ಅಯ್ಕೆ ಮಾಡಿಕೊಂಡಿತು. ಆರಂಭಿಕ ಬ್ಯಾಟರ್ ಸಿಮೊನ್ ಲಾರೆನ್ಸ್‌ (61; 44ಎ) ಮತ್ತು ಎಲಾಂದ್ರಿ ರೆನ್ಸ್‌ಬರ್ಗ್ (23) ಉತ್ತಮ ಆರಂಭ ನೀಡಿದರು. ಇದರಿಂದಾಗಿ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 166 ರನ್ ಗಳಿಸಿತು. ಈ ಜೋಡಿಯು ಕೇವಲ ನಾಲ್ಕು ಓವರ್‌ಗಳಲ್ಲಿ 56 ರನ್ ಸೇರಿಸಿತು. ಈ ಅಡಿಪಾಯದ ಮೇಲೆ ದೊಡ್ಡ ಮೊತ್ತ ಕಟ್ಟುವ ಅವಕಾಶ ತಂಡಕ್ಕೆ ಇತ್ತು. ಶಫಾಲಿ ಅವರು ಮಧ್ಯಮ ಕ್ರಮಾಂಕದ ಪ್ರಮುಖ ಇಬ್ಬರು ಬ್ಯಾಟರ್‌ಗಳ ವಿಕೆಟ್‌ ಗಳಿಸಿದ್ದರಿಂದ ರನ್‌ ಕುಂಠಿತವಾಯಿತು. ಬ್ಯಾಟಿಂಗ್‌ನಲ್ಲಿಯೂ ಮಿಂಚಿದ ಶಫಾಲಿ ಅವರು ಶ್ವೇತಾ ಜೊತೆಗೂಡಿ ಮೊದಲ ವಿಕೆಟ್‌ಗೆ ಏಳು ಓವರ್‌ಗಳಲ್ಲಿ 77 ರನ್‌ ಗಳಿಸಿದರು. ಶಫಾಲಿ ಔಟಾದ ನಂತರ ಇನಿಂಗ್ಸ್‌ನ ಸಂಪೂರ್ಣ ಹೊಣೆ ಹೊತ್ತ ಶ್ವೇತಾ ತಂಡವನ್ನು ಗೆಲುವಿನ ಗಡಿ ಮುಟ್ಟಿಸಿದರು. ಭಾರತ ತಂಡವು 16.3 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 170 ರನ್‌ ಗಳಿಸಿತು. ಎರಡು ಅಂಕಗಳನ್ನು ಗಳಿಸಿತು. ಸೋಮವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಂಡವನ್ನು ಎದುರಿಸಲಿದೆ. ಸಂಕ್ಷಿಪ್ತ ಸ್ಕೋರು: (ಡಿ ಗುಂಪು), ದಕ್ಷಿಣ ಆಫ್ರಿಕಾ: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 166 (ಎಲಾಂದ್ರಿ ರೆನ್ಸ್‌ಬರ್ಗ್ 23, ಸಿಮೊನ್ ಲಾರೆನ್ಸ್ 61, ಮ್ಯಾಡಿಸನ್ ಲ್ಯಾಂಡ್ಸ್‌ಮನ್ 32, ಶಫಾಲಿ ವರ್ಮಾ 31ಕ್ಕೆ2) ಭಾರತ: 16.3 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 170 ( ಶ್ವೇತಾ ಶೆರಾವತ್ ಔಟಾಗದೆ 92, ಶಫಾಲಿ ವರ್ಮಾ 45, ಶೇಷನಿ ನಾಯ್ಡು 32ಕ್ಕೆ1, ಮಿಯಾನಿ ಸ್ಮಿತ್ 15ಕ್ಕೆ1) ಫಲಿತಾಂಶ: ಭಾರತ 19 ವರ್ಷದೊಳಗಿನ ತಂಡಕ್ಕೆ ಜಯ. ಸ್ಕಾಟ್ಲೆಂಡ್: 20 ಓವರ್‌ಗಳಲ್ಲಿ 9ಕ್ಕೆ 99 (ಎಮಾ ವಾಲಸಿಂಗಮ್ 37, ಇಂದುಜಾ ನಂದಕುಮಾರ್ 20ಕ್ಕೆ2, ವೈಷ್ಣವಿ ಮಹೇಶ್ 19ಕ್ಕೆ2, ಸಮೈರಾ 22ಕ್ಕೆ2) ಯುಎಇ: 16.2 ಓವರ್‌ಗಳಲ್ಲಿ 4ಕ್ಕೆ100 (ತೀರ್ಥ ಸತೀಶ್ 27, ಸಮೈರಾ ಧರಣಿದರ್ಕಾ 23, ಮಹಿಕಾ ಗೌರ್ ಔಟಾಗದೆ 33, ಮೈಸಿ ಮೆಸೀರಾ 7ಕ್ಕೆ2) ಫಲಿತಾಂಶ: ಯುಎಇಗೆ 6 ವಿಕೆಟ್‌ ಜಯ. ಎ ಗುಂಪು: ಆಸ್ಟ್ರೇಲಿಯಾ: 20 ಓವರ್‌ಗಳಲ್ಲಿ 5ಕ್ಕೆ130 (ಕ್ಲೇರ್ ಮೂರ್ 52, ಎಲಾ ಹೇವಾರ್ಡ್ 35, ಮೆರೂಫಾ ಅಕ್ತರ್ 29ಕ್ಕೆ2, ದಿಶಾ ಬಿಸ್ವಾಸ್ 25ಕ್ಕೆ2) ಬಾಂಗ್ಲಾದೇಶ: 18 ಓವರ್‌ಗಳಲ್ಲಿ 3ಕ್ಕೆ132 (ಅಫಿಯಾ ಹುಮೇರಾ 24, ದಿಲಾರಾ ಅಕ್ತರ್ 40, ಶೋಮಾ ಅಕ್ತರ್ ಔಟಾಗದೆ33, ಸುಮೈಯಾ ಅಖ್ತರ್ ಔಟಾಗದೆ 31) ಫಲಿತಾಂಶ:ಬಾಂಗ್ಲಾ ದೇಶ ತಂಡಕ್ಕೆ 7 ವಿಕೆಟ್‌ಜಯ. ಅಮೆರಿಕ: 20 ಓವರ್‌ಗಳಲ್ಲಿ 9ಕ್ಕೆ96 (ರಿತು ಸಿಂಗ್ 22, ದೆವಮಿ ವಿಹಾಂಗಾ 11ಕ್ಕೆ3, ವಿದೂಷಿಕಾ ಪೆರೆರಾ 15ಕ್ಕೆ2) ಶ್ರೀಲಂಕಾ: 19 ಓವರ್‌ಗಳಲ್ಲಿ 3ಕ್ಕೆ100 (ವಿಷ್ಮಿ ಗುಣರತ್ನೆ ಔಟಾಗದೆ 34, ಮನುದಿ ನಾನಯ್ಯಕರ್ ಔಟಾಗದೆ 32, ಭೂಮಿಕಾ 17ಕ್ಕೆ2) ಫಲಿತಾಂಶ: ಶ್ರೀಲಂಕಾಗೆ 7 ವಿಕೆಟ್‌ಗಳ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.