ದೀಪ್ತಿ, ಅಮನ್‌ಜೋತ್ ಮಿಂಚು ಈಸ್ಟ್ ಲಂಡನ್‌, ದಕ್ಷಿಣ ಆಫ್ರಿಕಾ: ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಅಮನ್‌ಜೋತ್‌ ಕೌರ್‌ ಮತ್ತು ದೀಪ್ತಿ ಶರ್ಮಾ ಅವರ ಆಲ್‌ರೌಂಡ್‌ ಆಟದಿಂದ ಭಾರತ ತಂಡ, ಮಹಿಳಾ ತ್ರಿಕೋನ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಶುಭಾರಂಭ ಮಾಡಿತು. ಇಲ್ಲಿನ ಬಫೆಲೊ ಪಾರ್ಕ್‌ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತ, 27 ರನ್‌ಗಳಿಂದ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ದ ಗೆದ್ದಿತು. ಮೊದಲು ಬ್ಯಾಟ್‌ ಮಾಡಿದ ಭಾರತ, 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 147 ರನ್‌ ಪೇರಿಸಿದರೆ, ದಕ್ಷಿಣ ಆಫ್ರಿಕಾ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 120 ರನ್‌ ಮಾತ್ರ ಗಳಿಸಿತು. ಯಸ್ಟಿಕಾ ಭಾಟಿಯಾ (35) ಹೊರತುಪಡಿಸಿ ಭಾರತದ ಅಗ್ರ ಕ್ರಮಾಂಕದ ಎ‌ಲ್ಲ ಬ್ಯಾಟರ್‌ಗಳು ವಿಫಲರಾದರು. ಸ್ಕೋರ್‌ 69 ಆಗುವಷ್ಟರಲ್ಲಿ ಐದು ವಿಕೆಟ್‌ಗಳು ಬಿದ್ದವು. ಈ ವೇಳೆ ಜತೆಯಾದ ದೀಪ್ತಿ (33 ರನ್‌, 23 ಎ.) ಮತ್ತು ಅಮನ್‌ಜೋತ್‌ (ಔಟಾಗದೆ 41, 30 ಎ.) ಅವರು ಆರನೇ ವಿಕೆಟ್‌ಗೆ 50 ಎಸೆತಗಳಲ್ಲಿ 76 ರನ್ ಸೇರಿಸಿ ಸವಾಲಿನ ಮೊತ್ತಕ್ಕೆ ಕಾರಣರಾದರು. ಆ ಬಳಿಕ ಬೌಲಿಂಗ್‌ನಲ್ಲೂ ಮಿಂಚಿದ ದೀಪ್ತಿ 30 ರನ್‌ಗಳಿಗೆ ಮೂರು ವಿಕೆಟ್‌ ಪಡೆದರು. ಅವರಿಗೆ ತಕ್ಕ ಸಾಥ್‌ ನೀಡಿದ ದೇವಿಕಾ ವೈದ್ಯ 19 ರನ್‌ ನೀಡಿ ಎರಡು ವಿಕೆಟ್‌ ತಮ್ಮದಾಗಿಸಿಕೊಂಡರು. ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರು ಅನಾರೋಗ್ಯದ ಕಾರಣ ಈ ಪಂದ್ಯದಲ್ಲಿ ಆಡಲಿಲ್ಲ. ಸ್ಮೃತಿ ಮಂದಾನ ತಂಡವನ್ನು ಮುನ್ನಡೆಸಿದರು. ಸೋಮವಾರ ನಡೆಯುವ ತನ್ನ ಮುಂದಿನ ಪಂದ್ಯದಲ್ಲಿ ಭಾರತ ತಂಡ, ವೆಸ್ಟ್‌ ಇಂಡೀಸ್‌ ವಿರುದ್ಧ ಪೈಪೋಟಿ ನಡೆಸಲಿದೆ. ಸಂಕ್ಷಿಪ್ತ ಸ್ಕೋರ್: ಭಾರತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 147 (ಯಸ್ಟಿಕಾ ಭಾಟಿಯಾ 35, ದೀಪ್ತಿ ಶರ್ಮಾ 33, ಅಮನ್‌ಜೋತ್‌ ಕೌರ್‌ ಔಟಾಗದೆ 41, ನೊಂಕುಲುಲೆಕೊ ಮಾಬ 15ಕ್ಕೆ 2, ಡೆಲ್ಮಿ ಟಕರ್‌ 14ಕ್ಕೆ 1) ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 120 (ಮೆರಿಯನ್‌ ಕಾಪ್‌ 22, ಸುನ್ ಲುಸ್‌ 29, ಕ್ಲೊ ಟ್ರಿಯೊನ್‌ 26, ದೀಪ್ತಿ ಶರ್ಮಾ 30ಕ್ಕೆ 3, ದೇವಿಕಾ ವೈದ್ಯ 19ಕ್ಕೆ 2) ಫಲಿತಾಂಶ: ಭಾರತಕ್ಕೆ 27 ರನ್‌ ಗೆಲುವು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.