ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ: ಎಂಟರ ಘಟ್ಟಕ್ಕೆ ಮಯಂಕ್ ಬಳಗ ತಿರುವನಂತಪುರ: ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಎಂಟರ ಘಟ್ಟ ಪ್ರವೇಶಿಸಿತು. ತುಂಬಾ ಕ್ರೀಡಾಂಗಣದಲ್ಲಿ ಶುಕ್ರವಾರ ಮುಕ್ತಾಯವಾದ ಸಿ ಗುಂಪಿನ ಪಂದ್ಯದಲ್ಲಿ ಕೇರಳ ತಂಡವು ಕರ್ನಾಟಕದ ಎದುರು ಡ್ರಾ ಮಾಡಿಕೊಂಡು, ಸೋಲಿನ ಆತಂಕದಿಂದ ಪಾರಾಯಿತು. ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಗಳಿಸಿದ್ದ ಕರ್ನಾಟಕ ತಂಡವು ಮೂರು ಪಾಯಿಂಟ್ ಪಡೆಯಿತು. ಗುಂಪಿನ ಅಂಕಪಟ್ಟಿಯಲ್ಲಿ ಒಟ್ಟು 29 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿತು. ಕರ್ನಾಟಕ ತಂಡವು ಇನ್ನೊಂದು ಪಂದ್ಯ ಆಡಬೇಕಿದೆ. ಲೀಗ್ ಸುತ್ತಿನ ಕೊನೆಯ ಮತ್ತು ಏಳನೇ ಪಂದ್ಯದಲ್ಲಿ ಜಾರ್ಖಂಡ್ ಎದುರು ರಾಂಚಿಯಲ್ಲಿ ಮಯಂಕ್ ಬಳಗ ಕಣಕ್ಕಿಳಿಯಲಿದೆ. 23 ಅಂಕ ಗಳಿಸಿರುವ ಜಾರ್ಖಂಡ್ ಸದ್ಯ ಎರಡನೇ ಸ್ಥಾನದಲ್ಲಿದೆ. ಪಂದ್ಯದ ಕೊನೆಯ ದಿನವಾದ ಶುಕ್ರವಾರ ಕರ್ನಾಟಕ ತಂಡವು ಮೊದಲ ಇನಿಂಗ್ಸ್‌ನಲ್ಲಿ 143 ರನ್‌ಗಳ ಮುನ್ನಡೆ ಪಡೆದು ಡಿಕ್ಲೇರ್ ಮಾಡಿಕೊಂಡಿತು. ಎರಡನೇ ದಿನದ ಮಧ್ಯಾಹ್ನವೇ ಬ್ಯಾಟಿಂಗ್ ಆರಂಭಿಸಿದ್ದ ಮಯಂಕ್ ಬಳಗವು 163.1 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 485 ರನ್‌ ಗಳಿಸಿತು. ಎರಡನೇ ಇನಿಂಗ್ಸ್‌ನಲ್ಲಿ ಕೇರಳಕ್ಕೆ ಆರಂಭದಲ್ಲಿಯೇ ಆಘಾತ ನೀಡಿದ ಕರ್ನಾಟಕ ಗೆಲುವಿಗಾಗಿ ಪ್ರಯತ್ನಿಸಿತು. ಆಫ್‌ಸ್ಪಿನ್ನರ್ ಕೃಷ್ಣಪ್ಪ ಗೌತಮ್ (22–7–35–3) ಅವರ ಶಿಸ್ತಿನ ದಾಳಿಯಿಂದಾಗಿ 86 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತು. ಆದರೆ, ಮೊದಲ ಇನಿಂಗ್ಸ್‌ನಲ್ಲಿ ಶತಕ ಹೊಡೆದಿದ್ದ ಸಚಿನ್ ಬೇಬಿ (ಔಟಾಗದೆ 37) ತಂಡದ ವಿಕೆಟ್‌ಗಳ ಪತನ ತಡೆದರು. ವತ್ಸಲ್ ಗೋವಿಂದ್ (26; 76ಎ) ಮತ್ತು ಸಲ್ಮಾನ್ ನಿಜಾರ್ (ಔಟಾಗದೆ 4; 29ಎ) ಸಚಿನ್‌ಗೆ ಉತ್ತಮ ಜೊತೆ ನೀಡಿದರು. ಕೇರಳ ತಂಡವು 51 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 96 ರನ್‌ ಗಳಿಸಿದ್ದಾಗ ಇನಿಂಗ್ಸ್‌ಗೆ ತೆರೆಯೆಳೆಯಲಾಯಿತು. ಸಂಕ್ಷಿಪ್ತ ಸ್ಕೋರು ಮೊದಲ ಇನಿಂಗ್ಸ್ ಕೇರಳ: 130.1 ಓವರ್‌ಗಳಲ್ಲಿ 342, ಕರ್ನಾಟಕ: 163.1 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 485 ಡಿಕ್ಲೇರ್ಡ್ (ಬಿ.ಆರ್. ಶರತ್ 53, ಶುಭಾಂಗ್ ಹೆಗಡೆ ಔಟಾಗದೆ 50, ವೈಶಾಖ ಚಂದ್ರನ್ 117ಕ್ಕೆ3, ನಿಧೀಶ್ 102ಕ್ಕೆ2, ಜಲಜ್ ಸಕ್ಸೆನಾ 124ಕ್ಕೆ2) ಎರಡನೇ ಇನಿಂಗ್ಸ್ ಕೇರಳ: 51 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 96 (ಸಚಿನ್ ಬೇಬಿ ಔಟಾಗದೆ 37, ವತ್ಸಲ್ ಗೋವೀಂದ್ 26, ಕೃಷ್ಣಪ್ಪ ಗೌತಮ್ 35ಕ್ಕೆ3) ಫಲಿತಾಂಶ: ಡ್ರಾ. ಕರ್ನಾಟಕಕ್ಕೆ ಮೊದಲ ಇನಿಂಗ್ಸ್ ಮುನ್ನಡೆಯ ಮೂರು ಅಂಕ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.