ಅಂತರ ವಲಯ ಕ್ರಿಕೆಟ್‌ ಟೂರ್ನಿ: ಶಿವು ದ್ವಿಶತಕ ಬೆಂಗಳೂರು: ಪ್ರೆಸಿಂಡೆಟ್ಸ್‌ ಇಲೆವೆನ್‌ ತಂಡದ ಆರ್‌.ಶಿವು ಅವರು ಕಿಣಿ ಸ್ಪೋರ್ಟ್ಸ್ ಅರೇನಾದಲ್ಲಿ ಶುಕ್ರವಾರ ನಡೆದ ಕೆಎಸ್‌ಸಿಎ 16 ವರ್ಷದೊಳಗಿನ ಬಾಲಕರ ಅಂತರ ವಲಯ ಟೂರ್ನಿಯ ಪಂದ್ಯದಲ್ಲಿ ದ್ವಿಶತಕ ದಾಖಲಿಸಿದರು. ಪ್ರೆಸಿಂಡೆಟ್ಸ್‌ ಇಲೆವೆನ್‌ ತಂಡವು 90 ಓವರ್‌ಗಳಲ್ಲಿ 4 ವಿಕೆಟ್‌ಗೆ 381 ರನ್‌ ಗಳಿಸಿತು. ಶಿವು ಅವರು 256 ಎಸೆತಗಳಲ್ಲಿ 30 ಬೌಂಡರಿಗಳ ನೆರವಿನಿಂದ 213 ರನ್‌ ಗಳಿಸಿದರು. ಅವರಿಗೆ ಎಸ್‌. ರಾಹುಲ್‌ (61;93ಎ), ನವನೀತ್‌ ವಿ.ರಾಜ್‌ (63;140ಎ) ಸಾಥ್‌ ನೀಡಿದರು. ಈ ಸವಾಲನ್ನು ಬೆನ್ನಟ್ಟಿದ ಧಾರವಾಡ ವಲಯ ತಂಡವು 90 ಓವರ್‌ಗಳಲ್ಲಿ 7 ವಿಕೆಟ್‌ಗೆ 303 ರನ್‌ಗಳಿಸಿ ಡ್ರಾ ಸಾಧಿಸಿತು. ಪ್ರೆಸಿಂಡೆಟ್ಸ್‌ ತಂಡ 3 ಪಾಯಿಂಟ್‌ ಗಳಿಸಿದರೆ, ಧಾರವಾಡ ತಂಡ 1 ಪಾಯಿಂಟ್‌ ಸಂಪಾದಿಸಿತು. ಇತರ ಪಂದ್ಯಗಳಲ್ಲಿ ರಾಯಚೂರು ವಲಯ ತಂಡವು 5 ರನ್‌ಗಳಿಂದ ಶಿವಮೊಗ್ಗ ವಲಯ ತಂಡವನ್ನು ಮಣಿಸಿದರೆ, ಬೆಂಗಳೂರು ಸಿಟಿ ಇಲೆವೆನ್‌– ವೈಸ್‌ ಪ್ರೆಸಿಡೆಂಟ್ಸ್‌ ಇಲೆವೆನ್‌, ಕಂಬೈನ್ಡ್‌ ಸಿಟಿ ಇಲೆವೆನ್‌– ಮೈಸೂರು ವಲಯ, ತುಮಕೂರು ವಲಯ– ಬೆಂಗಳೂರು ವಲಯ, ಸೆಕ್ರೆಟರಿಸ್‌ ಇಲೆವೆನ್‌– ಮಂಗಳೂರು ವಲಯ ತಂಡದೊಂದಿಗೆ ಡ್ರಾ ಸಾಧಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.