: ಏಷ್ಯಾ ಕಪ್‌ನಲ್ಲಿ 11 ವರ್ಷಗಳ ಬಳಿಕ ಬಾಂಗ್ಲಾ ವಿರುದ್ಧ ಭಾರತಕ್ಕೆ ಸೋಲು ಕೊಲಂಬೊ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸೂಪರ್ ಫೋರ್ ಹಂತದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಕೊನೆಯ ಪಂದ್ಯದಲ್ಲಿ ಭಾರತ ಆರು ರನ್ ಅಂತರದ ಸೋಲಿಗೆ ಶರಣಾಗಿದೆ. ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾ ತಂಡ 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 265 ರನ್‌ ಕಲೆಹಾಕಿತು. ಭಾರತ 49.5 ಓವರ್‌ಗಳಲ್ಲಿ 259 ರನ್‌ಗಳಿಗೆ ಅಲೌಟಾಯಿತು. ಇದರೊಂದಿಗೆ ಬಲಗೈ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಶತಕ ವ್ಯರ್ಥವೆನಿಸಿದೆ. ಬಾಗ್ಲಾದೇಶ ವಿರುದ್ಧದ ಸೋಲಿನೊಂದಿಗೆ ಟೂರ್ನಿಯಲ್ಲಿ ಭಾರತದ ಅಜೇಯ ಓಟಕ್ಕೆ ತೆರೆ ಬಿದ್ದಿದೆ. ಗುಂಪು ಹಂತದಲ್ಲಿ ಪಾಕಿಸ್ತಾನ ವಿರುದ್ದದ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದ್ದರೆ, ನೇಪಾಳ ವಿರುದ್ಧ ಮಳೆ ಬಾಧಿತ ಪಂದ್ಯದಲ್ಲಿ ಡಕ್ವರ್ಥ್ ಲೂಯಿಸ್ ನಿಮಯದಡಿಯಲ್ಲಿ 10 ವಿಕೆಟ್ ಅಂತರದ ಜಯ ಗಳಿಸಿತ್ತು. ಬಳಿಕ ಸೂಪರ್ ಫೋರ್ ಹಂತದಲ್ಲಿ ಪಾಕಿಸ್ತಾನ (228 ರನ್) ಹಾಗೂ ಶ್ರೀಲಂಕಾ (41 ರನ್) ವಿರುದ್ಧ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಈಗಾಗಲೇ ಫೈನಲ್‌ಗೆ ಲಗ್ಗೆಯಿಟ್ಟಿದೆ. ಏಕದಿನ ಕ್ರಿಕೆಟ್‌ನಲ್ಲಿ ಶುಭಮನ್ ಗಿಲ್ 5ನೇ ಶತಕ ಸಾಧನೆ ಮಾಡಿದರು. 133 ಎಸೆತಗಳನ್ನು ಎದುರಿಸಿದ ಗಿಲ್ ಎಂಟು ಬೌಂಡರಿ ಹಾಗೂ ಐದು ಸಿಕ್ಸರ್ ನೆರವಿನಿಂದ 121 ರನ್ ಗಳಿಸಿದರು. ಗಿಲ್ ಈವರೆಗೆ 32 ಏಕದಿನ ಪಂದ್ಯಗಳಲ್ಲಿ 63.41ರ ಸರಾಸರಿಯಲ್ಲಿ ಒಟ್ಟು 1712 ರನ್ ಪೇರಿಸಿದ್ದಾರೆ. ಟೂರ್ನಿಯಲ್ಲಿ ಸತತ ಮೂರು ಅರ್ಧಶತಕ ಗಳಿಸಿದ್ದ ರೋಹಿತ್ ಶರ್ಮಾ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟ್ ಆಗಿ ನಿರಾಸೆ ಅನುಭವಿಸಿದರು. ರೋಹಿತ್ ಅವರು ಚೊಚ್ಚಲ ಪಂದ್ಯವನ್ನಾಡುತ್ತಿರುವ ತನ್ಜಿಮ್ ಹಸನ್ ಸಕಿಬ್‌ಗೆ ವಿಕೆಟ್ ಒಪ್ಪಿಸಿದರು. ಆಲ್‌ರೌಂಡರ್‌ ರವೀಂದ್ರ ಜಡೇಜ (53ಕ್ಕೆ 1) ಅವರು ಈ ಪಂದ್ಯದ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 200 ವಿಕೆಟ್‌ ಪಡೆದ ಸಾಧನೆ ಮಾಡಿದರು. ಮಾತ್ರವಲ್ಲ, ಏಕದಿನ ಕ್ರಿಕೆಟ್‌ನಲ್ಲಿ 200 ವಿಕೆಟ್‌ ಮತ್ತು 2 ಸಾವಿರಕ್ಕೂ ಅಧಿಕ ರನ್‌ ಗಳಿಸಿದ ಭಾರತದ ಎರಡನೇ ಆಟಗಾರ ಎನಿಸಿಕೊಂಡರು. ದಿಗ್ಗಜ ಆಟಗಾರ ಕಪಿಲ್‌ ದೇವ್‌ ಮಾತ್ರ (253 ವಿಕೆಟ್‌ ಮತ್ತು 3,783 ರನ್) ಈ ಸಾಧನೆ ಮಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳ ಗಡಿ ದಾಟಿದ ಭಾರತದ ಏಳನೇ ಬೌಲರ್‌ ಎಂಬ ಗೌರವವನ್ನೂ ಎಡಗೈ ಸ್ಪಿನ್ನರ್‌ ತಮ್ಮದಾಗಿಸಿಕೊಂಡರು. ಕಪಿಲ್‌ ದೇವ್‌ ಅಲ್ಲದೆ ಅನಿಲ್‌ ಕುಂಬ್ಳೆ (334 ವಿಕೆಟ್‌), ಜಾವಗಲ್‌ ಶ್ರೀನಾಥ್‌ (315), ಅಜಿತ್‌ ಅಗರ್ಕರ್‌ (288), ಜಹೀರ್‌ ಖಾನ್‌ (269) ಮತ್ತು ಹರಭಜನ್‌ ಸಿಂಗ್‌ (265) ಈ ಸಾಧನೆ ಮಾಡಿದ್ದಾರೆ. ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ 11 ವರ್ಷಗಳ ಬಳಿಕ ಬಾಂಗ್ಲಾದೇಶ ವಿರುದ್ಧ ಭಾರತ ಸೋಲು ಕಂಡಿದೆ. ಈ ಹಿಂದೆ 2012ರಲ್ಲಿ ಮೀರ್‌ಪುರದಲ್ಲಿ ಐದು ವಿಕೆಟ್ ಅಂತರದ ಸೋಲಿಗೆ ಶರಣಾಗಿತ್ತು. ಒಟ್ಟಾರೆ ಬಹುರಾಷ್ಟ್ರೀಯ ಟೂರ್ನಿಯಲ್ಲಿ ಬಾಂಗ್ಲಾ ವಿರುದ್ಧ ಮೂರನೇ ಸೋಲು ಕಂಡಿದೆ. ಶಕಿಬ್‌ಗೆ 29ನೇ ವಿಕೆಟ್... ಭಾರತ ಹಾಗೂ ಬಾಂಗ್ಲಾದೇಶ ನಡುವಣ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಶಕಿಬ್ ಅಲ್ ಹಸನ್ ಮುಂಚೂಣಿಯಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.