ಕ್ಲಾಸೆನ್ ಬೀಸಾಟಕ್ಕೆ ಬೆಚ್ಚಿದ ಆಸ್ಟ್ರೇಲಿಯಾ ಸೆಂಚೂರಿಯನ್ (ದಕ್ಷಿಣ ಆಫ್ರಿಕಾ), (ಎಪಿ): ‌ಹೆನ್ರಿ ಕ್ಲಾಸೆನ್ ಅವರ ಸ್ಫೋಟಕ ಶತಕದ (83 ಎಸೆತಗಳಲ್ಲಿ 174) ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ನಾಲ್ಕನೇ ಅಂತರರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 164 ರನ್‌ಗಳಿಂದ ಸುಲಭವಾಗಿ ಸೋಲಿಸಿತು. ಐದು ಪಂದ್ಯಗಳ ಸರಣಿ ಈಗ 2–2 ಸಮಬಲಗೊಂಡಿದೆ. ದಕ್ಷಿಣ ಆಫ್ರಿಕಾ ಶುಕ್ರವಾರ ನಡೆದ ಈ ಪಂದ್ಯದಲ್ಲಿ 5 ವಿಕೆಟ್‌ಗೆ 416 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ಐದನೇ ಕ್ರಮಾಂಕದಲ್ಲಿ ಆಡಿದ ಅವರು 13 ಬೌಂಡರಿ ಮತ್ತು ಅಷ್ಟೇ ಸಂಖ್ಯೆಯ ಸಿಕ್ಸರ್‌ಗಳನ್ನು ಸಿಡಿಸಿ ಪ್ರವಾಸಿ ತಂಡದ ಬೌಲರ್‌ಗಳ ಬೆವರಿಳಿಸಿದರು. ಇದು ದಕ್ಷಿಣ ಆಫ್ರಿಕಾ ಬ್ಯಾಟರ್‌ ಒಬ್ಬರು ಗಳಿಸಿದ ನಾಲ್ಕನೇ ಅತ್ಯಧಿಕ ಮೊತ್ತ. ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಅವರು ಬೌಂಡರಿ ಬಳಿ ಕ್ಯಾಚ್‌ ನೀಡಿದರು. ಡೇವಿಡ್‌ ಮಲನಾ್ 45 ಎಸೆತಗಳಲ್ಲಿ 82 ರನ್ ಸಿಡಿಸಿದರು. ರಸಿ ವಾನ್‌ಡರ್‌ ಡಸೆನ್ 62 ರನ್ ಕೊಡುಗೆಯಿತ್ತರು. ವಿಕೆಟ್‌ ಗಳಿಸಲು ವಿಫಲರಾದ ಲೆಗ್‌ ಸ್ಪಿನ್ನರ್‌ ಆ್ಯಡಂ ಜಂಪಾ 10 ಓವರುಗಳಲ್ಲಿ 113 ರನ್ ನೀಡಿ ಅತ್ಯಂತ ದುಬಾರಿಯೆನಿಸಿದರು. ಈ ಮೊತ್ತಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ಬಿರುಸಿನ ಆಟವಾಡಿದರೂ 34.5 ಓವರುಗಳಲ್ಲಿ 252 ರನ್ ಗಳಿಸಲಷ್ಟೇ ಶಕ್ತವಾಯಿತು. ಆಸ್ಟ್ರೇಲಿಯಾ ಪರ ಅಲೆಕ್ಸ್‌ ಕ್ಯಾರಿ 77 ಎಸೆತಗಳಲ್ಲಿ 99 ರನ್ ಗಳಿಸಿ ಗಮ ಸೆಳೆದರು. ಲುಂಗಿ ಗಿಡಿ 51 ರನ್ನಿಗೆ 4 ವಿಕೆಟ್ ಪಡೆದರು. ರಬಾಡ 3 ವಿಕೆಟ್ ಪಡೆದರು. ಆದರೆ ಟ್ರಾವಿಸ್‌ ಹೆಡ್‌ ಅವರು ಗಾಯಾಳಾಗಿರುವುದು ಆಸ್ಟ್ರೇಲಿಯಾಕ್ಕೆ ಚಿಂತೆ ಮೂಡಿಸಿದೆ. ಜೆರಾಲ್ಡ್‌ ಕೊಯೆಟ್ಜಿ ಬೌಲಿಂಗ್‌ನಲ್ಲಿ ಪುಟಿದೆದ್ದ ಚೆಂಡು ಹೆಡ್‌ ಅವರ ಕೈಗೆ ಏಟಾಗಿ ಅವರು ಕ್ರೀಡಾಂಗಣದಿಂದ ನಿರ್ಗಮಿಸಿದರು. ಸ್ಕ್ಯಾನಿಂಗ್ ವೇಳೆ ಅವರ ಕೈ ಮೂಳೆಗೆ ಏಟಾಗಿರುವುದು ಪತ್ತೆಯಾಗಿದೆ. ಮೂರು ವಾರಗಳಲ್ಲಿ ಭಾರತದಲ್ಲಿ ನಡೆಯುವ ವಿಶ್ವಕಪ್‌ಗೆ ಅವರು ಲಭ್ಯರಾಗುವ ಬಗ್ಗೆ ಸಂದೇಹ ಮೂಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.