ಪಾಕಿಸ್ತಾನ: ವಿಶ್ವಕಪ್ ಟೂರ್ನಿಗೆ ನಸೀಂ ಅಲಭ್ಯ ದುಬೈ (ಪಿಟಿಐ): ಭಾರತದಲ್ಲಿ ಮುಂದಿನ ತಿಂಗಳು ಆರಂಭವಾಗಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡದ ವೇಗಿ ನಸೀಂ ಷಾ ಅಲಭ್ಯರಾಗಿದ್ದಾರೆ. 20 ವರ್ಷದ ನಸೀಂ ಈಚೆಗೆ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಭಾರತ ದ ಎದುರು ಆಡುವಾಗ ಗಾಯಗೊಂಡಿದ್ದರು. ಅವರ ಬಲಭುಜಕ್ಕೆ ಗಾಯವಾಗಿತ್ತು. ಕೊಲಂಬೊದಲ್ಲಿಯೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ, ಎಂ.ಆರ್‌. ಐ ಸ್ಕ್ಯಾನಿಂಗ್ ಕೂಡ ಮಾಡಲಾಯಿತು. ಗಾಯ ತುಸು ಗಂಭೀರವಾಗಿದೆ ಎಂಬ ವರದಿ ಬಂದಿದ್ದು, ಇಂಗ್ಲೆಂಡ್‌ನ ಪರಿಣತ ವೈದ್ಯರಿಂದ ಅಭಿಪ್ರಾಯ ಪಡೆಯಲೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಂದಾಗಿದೆ. ‘ಪಾಕ್ ಕ್ರಿಕೆಟ್ ಮಂಡಳಿಯ ವೈದ್ಯಕೀಯಬಳಗವು ನಸೀಂ ಅವರ ಆರೈಕೆ ಮಾಡುತ್ತಿದೆ. ಭುಜದ ಮಾಂಸಖಂಡದ ಗಾಯಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ‘ ಎಂದು ಮೂಲಗಳು ತಿಳಿಸಿವೆ. ಭಾರತದಲ್ಲಿ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 5ರಂದು ಆರಂಭವಾಗಲಿದೆ. 14ರಂದು ಭಾರತ ಮತ್ತು ಪಾಕ್ ತಂಡಗಳು ಅಹಮದಾಬಾದಿನಲ್ಲಿ ಮುಖಾಮುಖಿಯಾಗಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.