ಮಹಿಳಾ ಟಿ20 ವಿಶ್ವಕಪ್‌: ಪಾಕ್ ವಿರುದ್ಧ ಸ್ಮೃತಿ ಮಂದಾನ ಕಣಕ್ಕಿಳಿಯುವುದು ಅನುಮಾನ ಕೇಪ್‌ಟೌನ್‌: ಭಾರತ ತಂಡದ ಉಪನಾಯಕಿ ಸ್ಮೃತಿ ಮಂದಾನ ಅವರು ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡುವುದು ಅನುಮಾನ. ಭಾರತ– ಪಾಕಿಸ್ತಾನ ಪಂದ್ಯ ಭಾನುವಾರ ನಡೆಯಲಿದೆ. ಆಸ್ಟ್ರೇಲಿಯಾ ವಿರುದ್ಧ ಸೋಮವಾರ ನಡೆದಿದ್ದ ಅಭ್ಯಾಸ ಪಂದ್ಯದಲ್ಲಿ ಸ್ಮೃತಿ ಅವರ ಕೈಬೆರಳಿಗೆ ಗಾಯವಾಗಿದ್ದು, ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ‘ಅಭ್ಯಾಸ ಪಂದ್ಯದಲ್ಲಿ ಗಾಯಗೊಂಡಿದ್ದ ಸ್ಮೃತಿ ಅವರು ವಿಶ್ವಕಪ್‌ ಟೂರ್ನಿಯಿಂದ ಹೊರಬೀಳುವರೇ ಎಂಬುದನ್ನು ಈಗ ಹೇಳಲು ಸಾಧ್ಯವಿಲ್ಲ. ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯಕ್ಕೆ ಅವರು ಅಲಭ್ಯರಾಗಿದ್ದಾರೆ’ ಎಂದು ಐಸಿಸಿ ಮೂಲಗಳು ಹೇಳಿವೆ. 26 ವರ್ಷದ ಸ್ಮೃತಿ, ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ್ದರು. ಕೇವಲ ಮೂರು ಎಸೆತಗಳನ್ನು ಎದುರಿಸಿ ಔಟಾಗಿದ್ದರು. ಬಾಂಗ್ಲಾದೇಶ ವಿರುದ್ಧ ಬುಧವಾರ ನಡೆದಿದ್ದ ಅಭ್ಯಾಸ ಪಂದ್ಯದಲ್ಲಿ ಆಡಿರಲಿಲ್ಲ. ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರ ಫಿಟ್‌ನೆಸ್‌ ಕೂಡಾ ಚಿಂತೆಗೆ ಕಾರಣವಾಗಿದೆ. ಕಳೆದ ವಾರ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಅವರು ಭುಜದ ಗಾಯಕ್ಕೆ ಒಳಗಾಗಿದ್ದರು. ಮಧ್ಯಮ ಕ್ರಮಾಂಕದ ಬ್ಯಾಟರ್‌ ಆಗಿರುವ ಅವರು ಎರಡೂ ಅಭ್ಯಾಸ ಪಂದ್ಯಗಳಲ್ಲಿ ಬ್ಯಾಟ್‌ ಮಾಡಿರಲಿಲ್ಲ. ಇಂದು ಎರಡು ಪಂದ್ಯ: ವಿಶ್ವಕಪ್‌ ಟೂರ್ನಿಯಲ್ಲಿ ಶನಿವಾರ ಎರಡು ಪಂದ್ಯಗಳು ನಡೆಯಲಿವೆ. ಐದು ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯಾ ತಂಡ ‘ಎ’ ಗುಂಪಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಸವಾಲು ಎದುರಿಸಲಿದೆ. ಇನ್ನೊಂದು ಪಂದ್ಯದಲ್ಲಿ ಇಂಗ್ಲೆಂಡ್‌– ವೆಸ್ಟ್‌ ಇಂಡೀಸ್‌ ಪೈಪೋಟಿ ನಡೆಸಲಿವೆ. ಇಂದಿನ ಪಂದ್ಯಗಳು * ಇಂಗ್ಲೆಂಡ್‌– ವೆಸ್ಟ್‌ ಇಂಡೀಸ್‌ ಆರಂಭ: ಸಂಜೆ 6.30 * ಆಸ್ಟ್ರೇಲಿಯಾ– ನ್ಯೂಜಿಲೆಂಡ್‌ ಆರಂಭ: ರಾತ್ರಿ 10.30 ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.