ಏಷ್ಯನ್ ಗೇಮ್ಸ್: ಹಾಕಿ– ಹರ್ಮನ್‌ ಪಡೆಗೆ ಪೆನಾಲ್ಟಿ ಕಾರ್ನರ್‌ ಗೋಲು ಗಳಿಕೆ ಗುರಿ ಹಾಂಗ್‌ಝೌ: ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದ ಭಾರತ ತಂಡವು ಏಷ್ಯನ್ ಕ್ರೀಡಾಕೂಟದ ಪುರುಷರ ಹಾಕಿ ವಿಭಾಗದಲ್ಲಿ ಸಿಂಗಪುರ ತಂಡದ ಎದುರು ಆಡಲಿದೆ. ಮೊದಲ ಪಂದ್ಯದಲ್ಲಿ ಭಾರತ ತಂಡವು 16–0ಯಿಂದ ಉಜ್ಬೇಕಿಸ್ತಾನ ವಿರುದ್ಧ ಜಯಿಸಿತ್ತು. ಇದೀಗ ಎರಡನೇ ಪಂದ್ಯದಲ್ಲಿ ಪೆನಾಲ್ಲಿ ಕಾರ್ನರ್‌ಗಳನ್ನು ಗೋಲುಗಳನ್ನಾಗಿ ಪರಿವರ್ತಿಸುವ ಕೌಶಲವನ್ನು ಸುಧಾರಣೆ ಮಾಡಿಕೊಳ್ಳುವತ್ತ ಭಾರತ ಚಿತ್ತ ನೆಟ್ಟಿದೆ. ಮೊದಲ ಪಂದ್ಯದಲ್ಲಿ ತನಗೆ ಸಿಕ್ಕ 14 ಪೆನಾಲ್ಟಿಗಳಲ್ಲಿ ಕೇವಲ ಐದು ಗೋಲು ಮಾಡುವಲ್ಲಿ ಭಾರತದ ಆಟಗಾರರು ಸಫಲರಾಗಿದ್ದರು. ಅದರಿಂದಾಗಿ ಈ ವಿಭಾಗದಲ್ಲಿ ಹೆಚ್ಚಿನ ಸುಧಾರಣೆಗೆ ಮುಖ್ಯ ಕೋಚ್ ಕ್ರೇಗ್ ಫುಲ್ಟನ್ ಮುಂದಾಗಿದ್ದಾರೆ. ಎಕೆಂದರೆ ಮುಂದಿನ ಹಂತಗಳಲ್ಲಿ ಬಲಿಷ್ಠ ತಂಡಗಳು ಎದುರಾದಾಗ ಒಂದೊಂದು ಗೋಲು ಅವಕಾಶವೂ ಅಮೂಲ್ಯವಾಗುತ್ತದೆ. ತಂಡದಲ್ಲಿರುವ ಲಲಿತ್ ಉಪಾಧ್ಯಾಯ, ಮನದೀಪ್ ಸಿಂಗ್ ಅವರು ಉತ್ತಮ ಆಟವಾಡಿದ್ದರು. ಮಿಡ್‌ಫೀಲ್ಡ್‌ನಲ್ಲಿ ಮನಪ್ರೀತ್ ಸಿಂಗ್, ಉಪನಾಯಕ ಹಾರ್ದಿಕ್ ಸಿಂಗ್ ಮತ್ತು ವಿವೇಕ್ ಸಾಗರ ಪ್ರಸಾದ್ ಅವರು ತಮ್ಮ ಉತ್ತಮ ಲಯವನ್ನು ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಸಿಂಗಪುರ ತಂಡವು ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಎದುರು ದೊಡ್ಡ ಅಂತರದಿಂದ ಸೋಲನುಭವಿಸಿತ್ತು. ಅಷ್ಟೇನೂ ಬಲಿಷ್ಠವಲ್ಲದ ಸಿಂಗಪುರವನ್ನು ಸೋಲಿಸುವ ವಿಶ್ವಾಸದಲ್ಲಿ ಭಾರತವಿದೆ. ನಂತರ 28ರಂದು ಹಾಲಿ ಚಾಂಪಿಯನ್ ಜಪಾನ್ ತಂಡವನ್ನು ಎದುರಿಸಲಿದೆ. 30ರಂದು ಪಾಕಿಸ್ತಾನ ಹಾಗೂ ಅಕ್ಟೋಬರ್ 2ರಂದು ಬಾಂಗ್ಲಾದೇಶ ವಿರುದ್ಧ ಭಾರತ ಸೆಣೆಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.