ಗಿಲ್‌ ಐಸಿಸಿ ತಿಂಗಳ ಆಟಗಾರ ದುಬೈ: ಭಾರತದ ಬ್ಯಾಟರ್ ಶುಭಮನ್ ಗಿಲ್‌ ಅವರು ಜನವರಿ ತಿಂಗಳ ಐಸಿಸಿ ಆಟಗಾರ ಗೌರವಕ್ಕೆ ಭಾಜನರಾಗಿದ್ದಾರೆ. ಏಕದಿನ ಮಾದರಿಯಲ್ಲಿ ತೋರಿದ ಉತ್ತಮ ಆಟಕ್ಕಾಗಿ ಅವರಿಗೆ ಈ ಗೌರವ ಒಲಿದಿದೆ. ಕಳೆದ ತಿಂಗಳು ಶ್ರೀಲಂಕಾ ಮತ್ತು ನ್ಯೂಜಿಲೆಂಡ್‌ ತಂಡಗಳ ಎದುರು ನಡೆದ ಏಕದಿನ ಸರಣಿಗಳಲ್ಲಿ 23 ವರ್ಷದ ಗಿಲ್ ಮಿಂಚಿದ್ದರು. ಮೂರು ಶತಕಗಳನ್ನು ಒಳಗೊಂಡ 567 ರನ್ ಗಳಿಸಿದ್ದರು. ಕಿವೀಸ್‌ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಸಿಡಿಸಿದ ಅಬ್ಬರದ ದ್ವಿಶತಕವೂ (208) ಅದರಲ್ಲಿ ಸೇರಿದೆ. ತಿಂಗಳ ಆಟಗಾರ ಪ್ರಶಸ್ತಿಯ ಸ್ಪರ್ಧೆಯಲ್ಲಿ ಗಿಲ್‌ ಅವರು ಸಹ ಆಟಗಾರ ಮೊಹಮ್ಮದ್ ಸಿರಾಜ್ ಮತ್ತು ನ್ಯೂಜಿಲೆಂಡ್‌ನ ಡೆವೊನ್ ಕಾನ್ವೆ ಅವರನ್ನು ಹಿಂದಿಕ್ಕಿದ್ದಾರೆ. ಗ್ರೇಸ್‌ಗೆ ಗೌರವ: ಇಂಗ್ಲೆಂಡ್‌ನ 19 ವರ್ಷದೊಳಗಿನವರ ಮಹಿಳಾ ತಂಡದ ನಾಯಕಿ ಗ್ರೇಸ್ ಸ್ಕ್ರಿವೆನ್ಸ್ ಅವರು ತಿಂಗಳ ಆಟಗಾರ್ತಿ ಗೌರವ ಪಡೆದಿದ್ದಾರೆ. ಈ ಪ್ರಶಸ್ತಿ ಪಡೆದ ಅತಿ ಕಿರಿಯ ಆಟಗಾರ್ತಿ ಎನಿಸಿಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.