ನವದೆಹಲಿ: ‘ಕುಟುಕು’ ವಿವಾದದಲ್ಲಿ ಚೇತನ್ ಶರ್ಮಾ ನವದೆಹಲಿ (ಪಿಟಿಐ): ಭಾರತ ತಂಡದ ಆಯ್ಕೆ ಪ್ರಕ್ರಿಯೆಯ ರಹಸ್ಯ ಮಾಹಿತಿಗಳನ್ನು ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ ಅವರು ಟಿವಿ ವಾಹಿನಿಯೊಂದರ ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗಪಡಿಸಿದ ಆರೋಪಕ್ಕೆ ಸಿಲುಕಿದ್ದಾರೆ. ಅವರು ತಂಡದ ಆಯ್ಕೆಯ ಕುರಿತು ಹಾಗೂ ಆಟಗಾರರ ಬಗ್ಗೆ ಮಾತನಾಡಿದ್ದನ್ನು ಝೀ ನ್ಯೂಸ್ ವಾಹಿನಿಯು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗಪಡಿಸಿದೆ. ಕೆಲವು ತಿಂಗಳುಗಳ ಹಿಂದೆ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನು ವಜಾಗೊಳಿಸಲಾಗಿತ್ತು. ನಂತರ ಹೊಸ ಸಮಿತಿ ರಚಿಸಿ ಮತ್ತೆ ಶರ್ಮಾ ಅವರನ್ನೇ ಮುಖ್ಯಸ್ಥರನ್ನಾಗಿ ಮಾಡಲಾಗಿತ್ತು. ಚೇತನ್ ಅವರು ತಂಡದ ಆಯ್ಕೆ ಸಭೆಯಲ್ಲಿ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹಾಗೂ ವಿರಾಟ್ ಕೊಹ್ಲಿ ಅವರೊಂದಿಗೆ ನಡೆಸಿದ ಮಾತುಕತೆಗಳ ಅಂಶಗಳನ್ನು ಬಹಿರಂಗ ಮಾಡಿದ್ದು ವಿಡಿಯೊಗಳಲ್ಲಿದೆ. ವಿರಾಟ್ ಮತ್ತು ಜಸ್‌ಪ್ರೀತ್ ಬೂಮ್ರಾ ಅವರ ಆಯ್ಕೆಯ ಕುರಿತ ರಹಸ್ಯ ಅಂಶಗಳೂ ಇಲ್ಲಿ ಕ್ಯಾಮೆರಾ ಮುಂದೆ ಬಹಿರಂಗಗೊಂಡಿವೆಯೆನ್ನಲಾಗಿದೆ. ಶೇಕಡ 80 ರಿಂದ 85ರಷ್ಟು ಫಿಟ್ ಆಗಿರುವ ಕ್ರಿಕೆಟಿಗರು ಸಾಮರ್ಥ್ಯವೃದ್ಧಿಯ ಚುಚ್ಚುಮದ್ದುಗಳನ್ನು ಪಡೆದು ತಂಡಕ್ಕೆ ಬರುತ್ತಾರೆ ಎಂದೂ ಚೇತನ್ ನೀಡಿರುವ ಹೇಳಿಕೆ ಈ ವಿಡಿಯೊದಲ್ಲಿದೆ ಎನ್ನಲಾಗಿದೆ. ಹೋದ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ಎದುರಿನ ಟಿ20 ಸರಣಿಗೆ ಮರಳಿದ್ದ ಜಸ್‌ಪ್ರೀತ್ ಬೂಮ್ರಾ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಭಾರತದ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ನಡುವೆ ಭಿನ್ನಾಭಿಪ್ರಾಯವಿತ್ತು ಎಂಬುದನ್ನೂ ಚೇತನ್ ಕುಟುಕು ಕಾರ್ಯಾಚರಣೆಯಲ್ಲಿ ಹೇಳಿದ್ದಾರೆನ್ನಲಾಗಿದೆ. ಈ ಕುರಿತು ಪ್ರತಿಕ್ರಿಯೆಗಾಗಿ ಶರ್ಮಾ ಅವರನ್ನು ಸಂಪರ್ಕಿಸಲು ಸುದ್ದಿಸಂಸ್ಥೆಯು ಪ್ರಯತ್ನಿಸಿತು. ಆದರೆ ಅವರು ಸಂಪರ್ಕಕ್ಕೆ ಲಭ್ಯರಾಗಲಿಲ್ಲ. ‘ಈ ಪ್ರಕರಣದ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರೇ ಪರಿಶೀಲಿಸುವರು. ಚೇತನ್ ಭವಿಷ್ಯ ಜಯ್ ಕೈಯಲ್ಲಿದೆ. ಆದರೆ ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅಥವಾ ಏಕದಿನ–ಟೆಸ್ಟ್ ನಾಯಕ ರೋಹಿತ್ ಶರ್ಮಾ ಅವರು ಮುಂಬರುವ ಸಭೆಗಳಲ್ಲಿ ಶರ್ಮಾ ಅವರೊಂದಿಗೆ ಭಾಗವಹಿಸಲು ಒಪ್ಪುವರೇ ಎಂಬುದನ್ನು ಕಾದುನೋಡಬೇಕು’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.