ಅಭ್ಯಾಸ ಪಂದ್ಯ ಆಡದ್ದು ತಪ್ಪು: ಕ್ಲಾರ್ಕ್‌ ಮೆಲ್ಬರ್ನ್‌ : ಬಾರ್ಡರ್‌–ಗಾವಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಗೂ ಮುನ್ನ ಆಸ್ಟ್ರೇಲಿಯಾ ತಂಡ ಅಭ್ಯಾಸ ಪಂದ್ಯ ಆಡದ್ದು ದೊಡ್ಡ ತಪ್ಪು ಎಂದು ಮಾಜಿ ನಾಯಕ ಮೈಕಲ್ ಕ್ಲಾರ್ಕ್‌ ಅಭಿಪ್ರಾಯಪಟ್ಟಿದ್ದಾರೆ. ‘ಆಸ್ಟ್ರೇಲಿಯಾ ತಂಡಕ್ಕೆ ಎದುರಾಗಿರುವ ಪರಿಸ್ಥಿತಿ ನನಗೆ ಅಚ್ಚರಿ ಉಂಟುಮಾಡಿಲ್ಲ. ಏಕೆಂದರೆ ತಂಡವು ಅಭ್ಯಾಸ ಪಂದ್ಯ ಆಡಿಲ್ಲ. ಭಾರತದ ಪರಿಸ್ಥಿತಿಗೆ ಹೊಂದಿಕೊಳ್ಳಲು ಕನಿಷ್ಠ ಒಂದು ಅಭ್ಯಾಸ ಪಂದ್ಯವನ್ನಾದರೂ ಆಡಬೇಕಿತ್ತು‘ ಎಂದು ಹೇಳಿದ್ದಾರೆ. ಪ್ಯಾಟ್‌ ಕಮಿನ್ಸ್‌ ನೇತೃತ್ವದ ಬಳಗ, ನಾಗಪುರ ಟೆಸ್ಟ್‌ ಪಂದ್ಯಕ್ಕೆ ಮುನ್ನ ಬೆಂಗಳೂರಿನಲ್ಲಿ ಒಂದು ವಾರ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿತ್ತು. ಮೊದಲ ಎರಡೂ ಟೆಸ್ಟ್‌ಗಳಲ್ಲಿ ಆಸ್ಟ್ರೇಲಿಯಾದ ಬ್ಯಾಟರ್‌ಗಳು ಭಾರತದ ಸ್ಪಿನ್‌ ದಾಳಿಯನ್ನು ಎದುರಿಸುವಲ್ಲಿ ವಿಫಲರಾಗಿದ್ದರು. ನವದೆಹಲಿಯಲ್ಲಿ ಭಾನುವಾರ ಕೊನೆಗೊಂಡ ಪಂದ್ಯವನ್ನು ರೋಹಿತ್‌ ಶರ್ಮ ಬಳಗ ಆರು ವಿಕೆಟ್‌ಗಳಿಂದ ಜಯಿಸಿತ್ತು. ಬಹುತೇಕ ಬ್ಯಾಟರ್‌ಗಳು ‘ಸ್ವೀಪ್‌ ಶಾಟ್‌’ಗೆ ಮುಂದಾಗಿದ್ದು, ಮತ್ತು ಮೊದಲ ಟೆಸ್ಟ್‌ ಪಂದ್ಯಕ್ಕೆ ಟ್ರಾವಿಸ್‌ ಹೆಡ್‌ ಅವರನ್ನು ಆಯ್ಕೆ ಮಾಡದ್ದು ಕೂಡಾ ಆಸ್ಟ್ರೇಲಿಯಾ ಮಾಡಿದ ತಪ್ಪು ಎಂದಿದ್ದಾರೆ. ನವದೆಹಲಿ ಟೆಸ್ಟ್‌ನಲ್ಲಿ ಆಸ್ಟ್ರೇ ಲಿಯಾದ ಅರ್ಧದಷ್ಟು ಬ್ಯಾಟರ್‌ಗಳು ಸ್ವೀಪ್‌ ಅಥವಾ ರಿವರ್ಸ್‌ ಸ್ವೀಪ್‌ಗೆ ಮುಂದಾಗಿ ವಿಕೆಟ್‌ ಒಪ್ಪಿಸಿದ್ದರು. ‘ಕ್ರೀಸ್‌ಗೆ ಬಂದ ಕೂಡಲೇ ಸ್ವೀಪ್‌ ಹೊಡೆತಗಳಿಗೆ ಮುಂದಾಗುವುದು ಸರಿಯಲ್ಲ. ಭಾರತ ತಂಡದಲ್ಲಿರುವ ವಿಶ್ವ ದರ್ಜೆಯ ಸ್ಪಿನ್ನರ್‌ಗಳ ಮುಂದೆ ರಿವರ್ಸ್‌ ಸ್ವೀಪ್‌ಗೆ ಪ್ರಯತ್ನಿಸುವುದೂ ಸರಿಯಾದ ನಿರ್ಧಾರ ಅಲ್ಲ’ ಎಂದಿದ್ದಾರೆ. ಸ್ಪಿನ್‌ ದಾಳಿಯನ್ನು ಹೇಗೆ ಎದುರಿ ಸಬೇಕು ಎಂಬುದನ್ನು ಭಾರತದ ಬ್ಯಾಟರ್‌ಗಳನ್ನು ನೋಡಿ ಕಲಿಯಬೇಕು ಎಂಬ ಸಲಹೆಯನ್ನೂ ಅವರು ನೀಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.