ಗಾಯದ ಸಮಸ್ಯೆ; ಐಪಿಎಲ್, ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೂ ಬೂಮ್ರಾ ಅಲಭ್ಯ? ಮುಂಬೈ: ಗಾಯದ ಸಮಸ್ಯೆ ಎದುರಿಸುತ್ತಿರುವ ಟೀಮ್ ಇಂಡಿಯಾ ಬಲಗೈ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ, ಪೂರ್ಣ ಫಿಟ್‌ನೆಸ್ ಮರಳಿ ಪಡೆಯದ ಕಾರಣ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಜೊತೆಗೆ ಸಂಭವನೀಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡುವುದು ಅನುಮಾನವೆನಿಸಿದೆ. ಈ ಕುರಿತು 'ಕ್ರಿಕ್‌ಬಜ್' ವರದಿ ಮಾಡಿದೆ. ಇದನ್ನೂ ಓದಿ: ಮಹಿಳೆಯರ ಟಿ20 ಕ್ರಿಕೆಟ್: ಆಸ್ಟ್ರೇಲಿಯಾಕ್ಕೆ ಆರನೇ ವಿಶ್ವಕಪ್ ಎನ್‌ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿರುವ ಬೂಮ್ರಾ, ಸಂಪೂರ್ಣ ಫಿಟ್ ಆಗಲು ಇನ್ನೂ ಕೆಲವು ಸಮಯ ಬೇಕಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಹೇಳಿದೆ. ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದಲೂ ಬೂಮ್ರಾ ಹೊರಗುಳಿಯಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಇನ್ನೊಂದು ಜಯ ಗಳಿಸಿದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಪ್ರವೇಶಿಸುವುದು ಖಚಿತವೆನಿಸಲಿದೆ. ಬೂಮ್ರಾ, ಕಳೆದ ವರ್ಷ ಸೆಪ್ಟೆಂಬರ್‌ 25ರಂದು ಆಸ್ಟ್ರೇಲಿಯಾ ವಿರುದ್ಧ ಕೊನೆಯದಾಗಿ ಟಿ20 ಪಂದ್ಯ ಆಡಿದ್ದರು. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕವಷ್ಟೇ ಅವರಿಗೆ ತಂಡವನ್ನು ಸೇರುವ ಅವಕಾಶ ಸಿಗಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.