ಕೆಸಿಸಿ ಕ್ರಿಕೆಟ್‌: ಚಿನ್ನಸ್ವಾಮಿಯಲ್ಲಿ ಕ್ರಿಸ್‌ ಗೇಲ್‌, ಆರ್‌ಸಿಬಿ ಪ್ರತಿಧ್ವನಿ ಬೆಂಗಳೂರು: ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ಪರವಾಗಿ ಬೆಂಗಳೂರಿನಲ್ಲಿ ಹತ್ತಾರು ಪಂದ್ಯಾವಳಿಗಳನ್ನು ಆಡಿದ್ದ ಕ್ರಿಸ್‌ ಗೇಲ್‌ಗೆ ಚಿನ್ನಸ್ವಾಮಿ ಕ್ರೀಡಾಂಗಣ ಹೋಂಗ್ರೌಂಡ್‌ ಇದ್ದಂತೆ. ಇಲ್ಲಿಗೆ, ಗೇಲ್‌ ಮೈದಾನಕ್ಕೆ ಹೆಜ್ಜೆ ಇಟ್ಟರೆ ಮುಗಿಲು ಮುಟ್ಟುತ್ತಿದ್ದ ‘ಆರ್‌ಸಿಬಿ..ಆರ್‌ಸಿಬಿ’ ಎಂಬ ಘೋಷಣೆ ಶುಕ್ರವಾರವೂ ಪ್ರತಿಧ್ವನಿಸಿತು. ಶುಕ್ರವಾರ(ಫೆ.24) ಎರಡು ದಿನಗಳ ಕನ್ನಡ ಚಲನಚಿತ್ರ ಕಪ್‌ಗೆ(ಕೆಸಿಸಿ) ಚಿನ್ನಸ್ವಾಮಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಆರಂಭವಾಗಿದ್ದು ಕೆಸಿಸಿ ಪಂದ್ಯಾವಳಿಯೋ ಅಥವಾ ಆರ್‌ಸಿಬಿ ಪಂದ್ಯವೋ ಎನ್ನುವಷ್ಟರ ಮಟ್ಟಿಗೆ ಆರ್‌ಸಿಬಿ ಹಾಗೂ ಕ್ರಿಸ್‌ ಗೇಲ್‌ ಹೆಸರು ಕ್ರೀಡಾಂಗಣದೊಳಗೆ ಪ್ರತಿಧ್ವನಿಸಿತು. ನಟ ಸುದೀಪ್‌ ಸಾರಥ್ಯದ ಹೊಯ್ಸಳ ಈಗಲ್ಸ್‌ ತಂಡದಲ್ಲಿದ್ದ ಗೇಲ್‌, ಮೈದಾನಕ್ಕೆ ಹೆಜ್ಜೆ ಇಡುತ್ತಿದ್ದಂತೆಯೇ ಆರ್‌ಸಿಬಿ ಘೋಷಣೆ ಮುಗಿಲು ಮುಟ್ಟಿತ್ತು. ಆದರೆ ನಿರೀಕ್ಷೆಗೆ ತಕ್ಕಂತೆ ಗೇಲ್‌ ಬ್ಯಾಟ್‌ನಿಂದ ಸಿಕ್ಸರ್‌ಗಳ ಸುರಿಮಳೆ ಸುರಿಯದಾಗ ವೀಕ್ಷಕರು ಬೇಸರಗೊಂಡರು. ಮೂರನೇ ಆವೃತ್ತಿಯ ಮೊದಲ ಪಂದ್ಯಾವಳಿ ಹೊಯ್ಸಳ ಈಗಲ್ಸ್‌ ಮತ್ತು ನಟ ಧನಂಜಯ ಅವರ ಗಂಗಾ ವಾರಿಯರ್ಸ್‌ ನಡುವಿತ್ತು. ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಸುದೀಪ್‌ ತಂಡವು, ವಾರಿಯರ್ಸ್‌ ತಂಡದಲ್ಲಿದ್ದ ಅಂತರರಾಷ್ಟ್ರೀಯ ಆಟಗಾರ ಸುರೇಶ್‌ ರೈನಾ ಅವರನ್ನು 20 ರನ್‌ಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಆದರೆ ಕರಣ್‌ ಆರ್ಯನ್‌(70 ರನ್‌; 32 ಎಸೆತ) ಅದ್ಭುತ ಆಟದಿಂದ ವಾರಿಯರ್ಸ್‌ 10 ಓವರ್‌ಗಳಲ್ಲಿ 114 ರನ್‌ ಪೇರಿಸಿತು. 115 ರನ್‌ಗಳ ಗುರಿ ಬೆನ್ನತ್ತಿದ ಈಗಲ್ಸ್‌ ತಂಡ ಕ್ರಿಸ್‌ ಗೇಲ್‌ ಅವರ ಮೇಲೆ ನಂಬಿಕೆಯಿಟ್ಟಿತ್ತು. ಆರಂಭದಲ್ಲಿ ನಿಧಾನಗತಿಯ ಆಟವಾಡಿದ ಗೇಲ್‌ ನಂತರ ಸತತ ಎರಡು ಸಿಕ್ಸರ್‌ ಸಿಡಿಸಿದರು. ಇದಾದ ನಂತರದ ಎಸೆತದಲ್ಲೇ ಕ್ಯಾಚ್‌ ನೀಡಿ ನಿರ್ಗಮಿಸಿದರು. ಕೊನೆಯ ಓವರ್‌ನಲ್ಲಿ 16 ರನ್‌ಗಳ ಅವಶ್ಯಕತೆ ತಂಡಕ್ಕಿತ್ತು. ಇದನ್ನು ದಾಟಲಾಗದೆ ಈಗಲ್ಸ್‌ ತಂಡ 2 ರನ್‌ಗಳಿಂದ ಸೋತಿತು. ಶನಿವಾರ(ಫೆ.25) ಮೂರು ಪಂದ್ಯಾವಳಿ ಹಾಗೂ ಫೈನಲ್‌ ನಡೆಯಲಿದೆ. ರಾರಾಜಿಸಿದ ಕನ್ನಡ ಧ್ವಜ: ಉದ್ಘಾಟನಾ ಸಮಾರಂಭದಲ್ಲಿ 80 ಅಡಿ ಉದ್ದ ಹಾಗೂ 120 ಅಡಿ ಅಗಲದ ಬೃಹತ್‌ ಕನ್ನಡ ಧ್ವಜವನ್ನು ನೂರಕ್ಕೂ ಅಧಿಕ ಕೆಸಿಸಿ ಆಟಗಾರರು ಮೈದಾನದಲ್ಲಿ ಅನಾವರಣಗೊಳಿಸಿದರು. ಭಾರಿ ಗಾತ್ರದ ಧ್ವಜ ಕಂಡು ನೆರೆದ ಜನರು ರೋಮಾಂಚನಗೊಂಡರು. ಇದು ಜಗತ್ತಿನ ಅತಿ ದೊಡ್ಡ ಕನ್ನಡ ಧ್ವಜ ಎಂದು ಕೆಸಿಸಿ ಆಯೋಜಕರು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.