: ಸುಲಭ ಜಯದ ನಿರೀಕ್ಷೆಯಲ್ಲಿ ಬಾಬರ್ ಬಳಗ ಹೈದರಾಬಾದ್: ಬಾಬರ್ ಆಜಂ ನಾಯಕತ್ವದ ಪಾಕಿಸ್ತಾನ ತಂಡವು ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ಅಭಿಯಾನ ಆರಂಭಿಸಲಿದೆ. ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಪಾಕ್ ತಂಡವು ನೆದರ್ಲೆಂಡ್ಸ್ ವಿರುದ್ಧ ಆಡಲಿದೆ. ಈಚೆಗೆ ನಡೆದ ಏಷ್ಯಾ ಕಪ್ ಟೂರ್ನಿಯಲ್ಲಿ ಸೋತಿದ್ದ ಪಾಕ್ ತಂಡವು ವಿಶ್ವಕಪ್ ಟೂರ್ನಿಯ ಎರಡು ಅಭ್ಯಾಸ ಪಂದ್ಯಗಳಲ್ಲಿಯೂ ನಿರಾಶೆ ಅನುಭವಿಸಿತ್ತು. ಏಕದಿನ ಕ್ರಿಕೆಟ್ ಮಾದರಿಯಲ್ಲಿ ತಮ್ಮ ಸಾಮರ್ಥ್ಯದ ಮಟ್ಟವನ್ನು ಸುಧಾರಿಸಿಕೊಳ್ಳಬೇಕಾದ ಅವಶ್ಯಕತೆ ಪಾಕ್ ತಂಡಕ್ಕೆ ಇದೆ. ಆರಂಭಿಕ ಬ್ಯಾಟಿಂಗ್‌ನಿಂದಲೇ ತಂಡದ ದೌರ್ಬಲ್ಯಗಳು ಕಾಣುತ್ತಿವೆ. ಏಕದಿನ ಮಾದರಿಯಲ್ಲಿ 50ರ ಸರಸರಿ ಹೊಂದಿರುವ ಬ್ಯಾಟರ್ ಇಮಾಮ್ ಉಲ್ ಹಕ್ ಅವರು ಈಚೆಗೆ ಭಾರತ ಎದುರಿನ ಪಂದ್ಯಗಳಲ್ಲಿ ಎಡವಿದ್ದರು. ಅನುಭವಿ ಫಕಾರ್ ಜಮಾನ್ ಫಾರ್ಮ್‌ನಲ್ಲಿ ಇಲ್ಲ. ಅಬ್ದುಲ್ ಶಫೀಕ್ ಅವರಿಗೆ ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ ಅನುಭವ ಇಲ್ಲ. ನಾಯಕ ಬಾಬರ್ ಮತ್ತು ಮೊಹಮ್ಮದ್ ರಿಜ್ವಾನ್ ಅವರು ಕೂಡ ಅಸ್ಥಿರ ಫಾರ್ಮ್‌ ಹೊಂದಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಇಫ್ತಿಕಾರ್ ಅಹಮದ್ ಮತ್ತು ಸಲ್ಮಾನ್ ಆಘಾ ಅವರ ಮೇಲೆ ಕೊಂಚ ಭರವಸೆ ಇಡಬಹುದು. ಬೌಲಿಂಗ್‌ನಲ್ಲಿಯೂ ತಂಡವು ಶಾಹೀನ್ ಅಫ್ರಿದಿ ಮತ್ತು ಹ್ಯಾರಿಸ್ ರವೂಫ್ ಅವರನ್ನೇ ಅವಲಂಬಿಸಬೇಕಿದೆ. ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಅವರು 97 ರನ್‌ಗಳನ್ನು ಕೊಟ್ಟು ದುಬಾರಿಯಾಗಿದ್ದರು. ಆದರೂ ಅನುಭವದ ಕೊರತೆ ಇರುವ ಮತ್ತು ಅಷ್ಟೇನೂ ಬಲಾಢ್ಯವಲ್ಲದ ನೆದರ್ಲೆಂಡ್ಸ್ ಎದುರು ಬಾಬರ್ ಬಳಗವೇ ಗೆಲುವಿನ ನೆಚ್ಚಿನ ತಂಡವಾಗಿದೆ. ಅದರ ಜೊತೆಗೆ ತನ್ನ ಸಾಮರ್ಥ್ಯ ಪರೀಕ್ಷಿಸಿಕೊಳ್ಳಲೂ ಅದಕ್ಕೆ ಇಲ್ಲಿ ಅವಕಾಶ ಸಿಗಲಿದೆ. ಒಂದು ತಿಂಗಳು ಮುನ್ನವೇ ಭಾರತಕ್ಕೆ ಬಂದಿಳಿದಿರುವ ನೆದರ್ಲೆಂಡ್ಸ್ ತಂಡವು ಬೆಂಗಳೂರಿನ ಆಲೂರು ಕ್ರೀಡಾಂಗಣದಲ್ಲಿ ತಾಲೀಮು ನಡೆಸಿತ್ತು. ನೆದರ್ಲೆಂಡ್ಸ್ 2011ರ ವಿಶ್ವಕಪ್ ಟೂರ್ನಿಯಲ್ಲಿ ಆಡಿತ್ತು. ಆಗ ತಂಡದಲ್ಲಿದ್ದ ವೆಸ್ಲಿ ಬಾರೆಸಿ ಈಗಲೂ ಇದ್ದಾರೆ. ಉಳಿದವರೆಲ್ಲರೂ ಹೊಸಬರು. ಆಂಧ್ರಪ್ರದೇಶ ಮೂಲಕ ತೇಜಾ ನಿಡಮಾನೂರು ಈ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದಾರೆ. ಪಾಕ್ ತಂಡಕ್ಕೆ ಹೋಲಿಸಿದರೆ ದುರ್ಬಲ ಹೌದು. ಆದರೆ ಅಚ್ಚರಿಯ ಫಲಿತಾಂಶ ಕೊಡುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ನಾಯಕರ ಬಲಾಬಲ (ಏಕದಿನ ಕ್ರಿಕೆಟ್) ಪಂದ್ಯ: 108 ರನ್: 5409 ಶತಕ: 19 ಅರ್ಧಶತಕ: 28 ರನ್: 1212 ಅರ್ಧಶತಕ: 13 ಪಾಕಿಸ್ತಾನ: ಬಾಬರ್ ಆಜಂ (ನಾಯಕ) ಇಮಾಮ್ ಉಲ್ ಹಕ್ ಫಕಾರ್ ಜಮಾನ್ ಮೊಹಮ್ಮದ್ ರಿಜ್ವಾನ್ (ವಿಕೆಟ್‌ಕೀಪರ್) ಇಫ್ತಿಕಾರ್ ಅಹಮದ್ ಮೊಹಮ್ಮದ್ ನವಾಜ್ ಶಾದಾಬ್ ಖಾನ್ ಹಸನ್ ಅಲಿ ಹ್ಯಾರಿಸ್ ರವೂಫ್ ಮೊಹಮ್ಮದ್ ವಾಸೀಂ ಜೂನಿಯರ್ ಶಾಹೀನ್ ಆಫ್ರಿದಿ ಸಾದ್ ಶಕೀಲ್ ಆಘಾ ಸಲ್ಮಾನ್ ಉಸಾಮ ಮೀರ್ ಅಬ್ದುಲ್ಲಾ ಶಫೀಕ್. ನೆದರ್ಲೆಂಡ್ಸ್: ಸ್ಕಾಟ್ ಎಡ್ವರ್ಡ್ಸ್ (ವಿಕೆಟ್‌ಕೀಪರ್–ನಾಯಕ) ವಿಕ್ರಮಜೀತ್ ಸಿಂಗ್ ಮ್ಯಾಕ್ಸ್ ಒಡೊವ್ಡ್ ವೆಸ್ಲಿ ಬಾರೆಸಿ ಬಾಸ್ ಡಿ ಲೀಡ್ ಕಾಲಿನ್ ಎಕರ್ಮನ್ ತೇಜಾ ನಿಡಮಾನೂರು ರೋಲಾಫ್ ವ್ಯಾನ್ ಡೆರ್ ಮರ್ವೆ ಸಕೀಬ್ ಝಲ್ಪಿಕರ್ ಲೊಗಾನ್ ವ್ಯಾನ್ ಬೀಕ್ ಪಾಲ್ ವ್ಯಾನ ಮೀಕರೆನ್ ರಿಯಾನ್ ಕ್ಲೀನ್ ಆರ್ಯನ್ ದತ್ ಸೈಬ್ರ್ಯಾಂಡ್ ಇಂಗೆಲ್‌ಬ್ರೆಚ್ ಶಾರೀಜ್ ಅಹಮದ್ ಪಂದ್ಯ ಆರಂಭ: ಮಧ್ಯಾಹ್ನ 2 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್‌ಸ್ಟಾರ್ ಆ್ಯಪ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.