ಆಸ್ಟ್ರೇಲಿಯಾ ಗಾಯಕ್ಕೆ ಬರೆ ಹಾಕುವ ಛಲ ಇಂದೋರ್: ವಿಶ್ವ ಟೆಸ್ಟ್ ಚಾಂಪಿ ಯನ್‌ಷಿಪ್ ಫೈನಲ್‌ನಲ್ಲಿ ಸ್ಥಾನ ಖಚಿತಪಡಿಸಿಕೊಳ್ಳುವತ್ತ ಚಿತ್ತ ನೆಟ್ಟಿರುವ ಭಾರತ ಕ್ರಿಕೆಟ್‌ ತಂಡವು ಬುಧವಾರ ಬಾರ್ಡರ್–ಗಾವಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ಮೊದಲ ಎರಡೂ ಪಂದ್ಯಗಳನ್ನು ಗೆದ್ದಿರುವ ರೋಹಿತ್ ಶರ್ಮಾ ಬಳಗವು ಅಪಾರ ಆತ್ಮವಿಶ್ವಾಸದಲ್ಲಿದೆ. ರೋಹಿತ್ ಜೊತೆಗೆ ಇನಿಂಗ್ಸ್ ಆರಂಭಿಸಲು ರಾಹುಲ್ ಆಥವಾ ಶುಭಮನ್ ಗಿಲ್ ಅವರಲ್ಲಿ ಒಬ್ಬರಿಗೆ ಅವಕಾಶ ಸಿಗಲಿದೆ. ಸತತ ವೈಫಲ್ಯ ಅನುಭವಿಸುತ್ತಿರುವ ರಾಹುಲ್ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯೇ ಹೆಚ್ಚಿದೆ. ವಿಕೆಟ್‌ಕೀಪರ್ ಭರತ್ ಮತ್ತೊಂದು ಅವಕಾಶ ಗಿಟ್ಟಿಸುವುದು ಖಚಿತ. ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ ಅವರೂ ಮುಂದುವರಿಯಲಿದ್ದಾರೆ. ಆದರೆ ಶ್ರೇಯಸ್ ಅಯ್ಯರ್ ಆಡುವುದು ಖಚಿತವಿಲ್ಲ. ಅವರ ಬದಲಿಗೆ ಸೂರ್ಯಕುಮಾರ್ ಯಾದವ್‌ಗೆ ಮತ್ತೆ ಅವಕಾಶ ಸಿಗಬಹುದು. ಬೌಲಿಂಗ್‌ನಲ್ಲಿ ಮೂವರು ಸ್ಪಿನ್ನರ್‌–ಆಲ್‌ರೌಂಡರ್‌ಗಳು ಹಾಗೂ ಇಬ್ಬರು ವೇಗಿಗಳು ಕಣಕ್ಕಿಳಿಯುವ ಸಾಧ್ಯತೆಯೇ ಹೆಚ್ಚು. ಆದರೆ ಆಸ್ಟ್ರೇಲಿಯಾ ತಂಡವು ಸತತ ಎರಡು ಸೋಲುಗಳಿಂದಾಗಿ ಒತ್ತಡದಲ್ಲಿದೆ. ನಾಲ್ಕು ಪಂದ್ಯಗಳ ಸರಣಿಯನ್ನು ಜಯಿಸುವ ಅವಕಾಶವಂತೂ ಪ್ರವಾಸಿ ಬಳಗಕ್ಕೆ ಉಳಿದಿಲ್ಲ. ಆದರೆ, ಇನ್ನೆರಡೂ ಪಂದ್ಯಗಳನ್ನು ಗೆದ್ದು ಸರಣಿ ಸಮ ಮಾಡಿಕೊಳ್ಳಬಹುದಷ್ಟೇ. ಆದರೆ ತಂಡಕ್ಕೆ ಪ್ರಮುಖ ಆಟಗಾರರ ಅನುಪಸ್ಥಿತಿ ಕಾಡುತ್ತಿದೆ. ನಾಯಕ ಪ್ಯಾಟ್ ಕಮಿನ್ಸ್ ಕೌಟುಂಬಿಕ ಕಾರಣಗಳಿಗಾಗಿ ತವರಿಗೆ ಮರಳಿದ್ದಾರೆ. ಜೋಶ್ ಹ್ಯಾಜಲ್‌ವುಡ್, ಬ್ಯಾಟರ್ ಡೇವಿಡ್ ವಾರ್ನರ್ ಫಿಟ್‌ ಆಗಿಲ್ಲ. ಇದರಿಂದಾಗಿ ತಂಡವನ್ನು ಸ್ಟೀವ್ ಸ್ಮಿತ್ ಮುನ್ನಡೆಸಲಿದ್ದಾರೆ. ಸ್ಪಿನ್ನರ್ ನೇಥನ್ ಲಯನ್ ಮಾತ್ರ ಅಮೋಘ ಲಯದಲ್ಲಿದ್ದಾರೆ. ಹೋಳ್ಕರ್‌ನಲ್ಲಿ ಮೂರನೇ ಟೆಸ್ಟ್: ದೇಶದ ಐತಿಹಾಸಿಕ ಕ್ರಿಕೆಟ್ ತಾಣಗಳಲ್ಲಿ ಒಂದಾಗಿರುವ ಇಂದೋರ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಇದಾಗಿದೆ. ಪೂರ್ವನಿರ್ಧರಿತ ವೇಳಾಪಟ್ಟಿಯ ಪ್ರಕಾರ ಈ ಪಂದ್ಯವು ಧರ್ಮಶಾಲಾದಲ್ಲಿ ನಡೆಯಬೇಕಿತ್ತು. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಪಂದ್ಯವನ್ನು ಇಂದೋರ್‌ಗೆ ಸ್ಥಳಾಂತರಿಸಲಾಗಿದೆ. ಇಲ್ಲಿಯ ಪಿಚ್‌ನಲ್ಲಿ ಇಲ್ಲಿಯವರೆಗೆ ನಡೆದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ರನ್‌ಗಳ ಹೊಳೆಯೇ ಹರಿದಿದೆ. ವೀರೇಂದ್ರ ಸೆಹ್ವಾಗ್ ದ್ವಿಶತಕ ಹೊಡೆದ ಅಂಗಳವೂ ಇದಾಗಿದೆ. ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ವಿರುದ್ಧ ನಡೆದಿದ್ದ ಟೆಸ್ಟ್‌ಗಳಲ್ಲಿಯೂ ಭಾರತ ಜಯಿಸಿತ್ತು. ಆತಿಥೇಯ ಬ್ಯಾಟರ್‌ಗಳು ಮಿಂಚಿದ್ದರು. ವಿರಾಟ್ ಕೊಹ್ಲಿ ದ್ವಿಶತಕ ಕೂಡ ಗಳಿಸಿದ್ದರು. ತಂಡಗಳು: ಭಾರತ: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಸ್. ಭರತ್, ಇಶಾನ್ ಕಿಶನ್, ಆರ್. ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಸೂರ್ಯಕುಮಾರ್ ಯಾದವ್, ಜೈದೇವ್ ಉನದ್ಕತ್ ಆಸ್ಟ್ರೇಲಿಯಾ: ಸ್ಟೀವ್ ಸ್ಮಿತ್ (ನಾಯಕ), ಸ್ಕಾಟ್ ಬೊಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರಾನ್ ಗ್ರೀನ್, ಪೀಟರ್ ಹ್ಯಾಂಡ್ಸ್‌ಕಂಬ್, ಟ್ರಾವಿಸ್ ಹೆಡ್, ಉಸ್ಮಾನ್ ಖ್ವಾಜಾ, ಮ್ಯಾಟ್ ಕುನೇಮನ್, ಮಾರ್ನಸ್ ಲಾಬುಷೇನ್, ನೇಥನ್ ಲಯನ್, ಲ್ಯಾನ್ಸ್ ಮಾರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್‌ಶಾ, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವಿಪ್ಸನ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.