ಏಂಜೆಲೊ ಮ್ಯಾಥ್ಯೂಸ್‌ ಶತಕ ಕ್ರೈಸ್ಟ್‌ಚರ್ಚ್‌ (ಎಎಫ್‌ಪಿ): ಏಂಜೆಲೊ ಮ್ಯಾಥ್ಯೂಸ್‌ (115) ಅವರ ಶತಕದ ನೆರವಿನಿಂದ ಶ್ರೀಲಂಕಾ ತಂಡ ಮೊದಲ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆಲುವಿಗೆ 285 ರನ್‌ಗಳ ಗುರಿ ನೀಡಿದೆ. ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನವಾದ ಭಾನುವಾರ ಶ್ರೀಲಂಕಾ, ಎರಡನೇ ಇನಿಂಗ್ಸ್‌ನಲ್ಲಿ 302 ರನ್‌ಗಳಿಗೆ ಆಲೌಟಾಯಿತು. ಆತಿಥೇಯ ತಂಡ ದಿನದಾಟದ ಅಂತ್ಯಕ್ಕೆ ಡೆವೊನ್‌ ಕಾನ್ವೆ (5) ಅವರ ವಿಕೆಟ್‌ ಕಳೆದುಕೊಂಡು 28 ರನ್‌ ಗಳಿಸಿದೆ. ಅಂತಿಮ ದಿನ ಗೆಲುವಿಗೆ 257 ರನ್‌ ಗಳಿಸುವ ಸವಾಲು ಟಿಮ್‌ ಸೌಥಿ ಬಳಗದ ಮುಂದಿದೆ. ಟಾಮ್‌ ಲಥಾಮ್‌ (ಬ್ಯಾಟಿಂಗ್‌ 11) ಮತ್ತು ಕೇನ್‌ ವಿಲಿಯಮ್ಸನ್‌ (ಬ್ಯಾಟಿಂಗ್‌ 7) ಕ್ರೀಸ್‌ನಲ್ಲಿದ್ದಾರೆ. ಮ್ಯಾಥ್ಯೂಸ್‌ ಆಸರೆ: ಮೂರು ವಿಕೆಟ್‌ಗಳಿಗೆ 83 ರನ್‌ಗಳಿಂದ ಆಟ ಮುಂದುವರಿಸಿದ್ದ ಪ್ರವಾಸಿ ತಂಡ ಎರಡನೇ ಇನಿಂಗ್ಸ್‌ನಲ್ಲೂ 300ಕ್ಕಿಂತ ಅಧಿಕ ರನ್‌ ಪೇರಿಸಿತು. ಎದುರಾಳಿ ತಂಡವನ್ನು ಬೇಗನೇ ಆಲೌಟ್‌ ಮಾಡುವ ನ್ಯೂಜಿಲೆಂಡ್ ತಂಡದ ಕನಸಿಗೆ ಮ್ಯಾಥ್ಯೂಸ್‌ ಅಡ್ಡಿಯಾದರು. 235 ಎಸೆತಗಳನ್ನು ಎದುರಿಸಿದ ಅವರು 11 ಬೌಂಡರಿ ಹೊಡೆದರು. ಮ್ಯಾಥ್ಯೂಸ್‌ ಅವರು ದಿನೇಶ್‌ ಚಾಂಡಿಮಲ್‌ (42 ರನ್‌) ಜೊತೆ ಐದನೇ ವಿಕೆಟ್‌ಗೆ 105 ರನ್‌ ಸೇರಿಸಿದರು. ಔಟಾಗುವ ಮುನ್ನ ಅವರು ಧನಂಜಯ ಡಿಸಿಲ್ವಾ ಅವರೊಂದಿಗೆ ಆರನೇ ವಿಕೆಟ್‌ಗೆ 60 ರನ್‌ ಕಲೆಹಾಕಿದರು. ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌: ಶ್ರೀಲಂಕಾ 92.4 ಓವರ್‌ಗಳಲ್ಲಿ 355. ನ್ಯೂಜಿಲೆಂಡ್‌ 107.3 ಓವರ್‌ಗಳಲ್ಲಿ 373. ಎರಡನೇ ಇನಿಂಗ್ಸ್‌ ಶ್ರೀಲಂಕಾ: 105.3 ಓವರ್‌ಗಳಲ್ಲಿ 302 (ಏಂಜೆಲೊ ಮ್ಯಾಥ್ಯೂಸ್‌ 115, ದಿನೇಶ್‌ ಚಾಂಡಿಮಲ್‌ 42, ಧನಂಜಯ ಡಿಸಿಲ್ವಾ ಔಟಾಗದೆ 47, ಬ್ಲೇರ್‌ ಟಿಕ್ನೆರ್‌ 100ಕ್ಕೆ 4, ಮ್ಯಾಟ್‌ ಹೆನ್ರಿ 71ಕ್ಕೆ 3) ನ್ಯೂಜಿಲೆಂಡ್‌: 17 ಓವರ್‌ಗಳಲ್ಲಿ 1 ವಿಕೆಟ್‌ಗೆ 28 (ಟಾಮ್‌ ಲಥಾಮ್‌ ಬ್ಯಾಟಿಂಗ್‌ 11, ಕೇನ್‌ ವಿಲಿಯಮ್ಸನ್‌ ಬ್ಯಾಟಿಂಗ್‌ 7) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.