ಡಬ್ಲ್ಯುಪಿಎಲ್: ಮುಂಬೈಗೆ ಸತತ ನಾಲ್ಕನೇ ಜಯ ಮುಂಬೈ: ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಬಿರುಸಿನ ಅರ್ಧಶತಕ (ಔಟಾಗದೆ 53, 33 ಎಸೆತ, 4X9, 6X1) ಹಾಗೂ ಯಷ್ಟಿಕಾ ಭಾಟಿಯಾ ಮತ್ತು ನತಾಲಿ ಸಿವೆರ್ ಬ್ರಂಟ್‌ ಉತ್ತಮ ಬ್ಯಾಟಿಂಗ್ ಬಲದಿಂದ ಮಹಿಳಾ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಗೆದ್ದಿತು. ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮುಂಬೈ 8 ವಿಕೆಟ್‌ಗಳಿಂದ ಯುಪಿ ವಾರಿಯರ್ಸ್ ತಂಡವನ್ನು ಸೋಲಿಸಿತು. ಯುಪಿ ವಾರಿಯರ್ಸ್ ನೀಡಿದ 160 ರನ್‌ಗಳ ಗುರಿ ಬೆನ್ನತ್ತಿದ ಮುಂಬೈ 17.3 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ಗೆದ್ದಿತು. ಹರ್ಮನ್‌ಪ್ರೀತ್ ಅವರೊಂದಿಗೆ ಯಷ್ಟಿಕಾ (42, 27ಎ, 4X8, 6X1) ಮತ್ತು ಬ್ರಂಟ್‌ (ಔಟಾಗದೆ 45, 31ಎ, 4X6, 6X1) ಮಿಂಚಿದರು. ಮುಂಬೈ ತಂಡಕ್ಕೆ ಇದು ಸತತ ನಾಲ್ಕನೇ ಜಯವಾಗಿದೆ. ಹೋರಾಟದ ಮೊತ್ತ: ಅಲೀಸಾ ಹೀಲಿ ಹಾಗೂ ತಹಿಲಾ ಮೆಕ್‌ಗ್ರಾ ಅವರ ಅರ್ಧಶತಕಗಳ ಬಲದಿಂದ ಯುಪಿ ವಾರಿಯರ್ಸ್ ತಂಡವು ಹೋರಾಟದ ಮೊತ್ತ ಗಳಿಸಿತು. ಟಾಸ್ ಗೆದ್ದ ಯುಪಿ ತಂಡವು ಬ್ಯಾಟಿಂಗ್ ಅಯ್ಕೆ ಮಾಡಿಕೊಂಡಿತು. ಆರಂಭಿಕ ಬ್ಯಾಟರ್ ಹೀಲಿ (58; 46ಎ, 4X7, 6X1) ಹಾಗೂ ತಹಿಲಾ (50; 37ಎ, 4X9) ಬ್ಯಾಟಿಂಗ್ ಬಲದಿಂದ ಯುಪಿ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 159 ರನ್ ಗಳಿಸಿತು. ಯುಪಿ ತಂಡದ ಆರಂಭ ಉತ್ತಮವಾಗಿರಲಿಲ್ಲ. ಕೇವಲ ಎಂಟು ರನ್‌ಗಳು ಸ್ಕೋರ್‌ಬೋರ್ಡ್‌ನಲ್ಲಿದ್ದಾಗಲೇ ಬ್ಯಾಟರ್ ದೇವಿಕಾ ವೈದ್ಯ ಅವರನ್ನು ಮುಂಬೈ ತಂಡದ ಸೈಕಾ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಈ ಹಂತದಲ್ಲಿ ಹೀಲಿ ಜೊತೆ ಸೇರಿದ ಕಿರಣ್ ನವಿಗಿರೆ (17ರನ್) ಎರಡನೇ ವಿಕೆಟ್ ಜೊತೆಯಾಟದಲ್ಲಿ 50 ರನ್‌ ಸೇರಿಸಿದರು. ಕಿರಣ್ ವಿಕೆಟ್ ಗಳಿಸಿದ ಅಮೆಲಿಯಾ ಅವರು ಜೊತೆಯಾಟ ಮುರಿದರು. ಕ್ರೀಸ್‌ಗೆ ಬಂದ ತಹಿಲಾ ಮೆಕ್‌ಗ್ರಾ ಅವರು ಹೀಲಿ ಜೊತೆಗೆ ಸೇರಿ ಇನಿಂಗ್ಸ್‌ಗೆ ಬಲ ತುಂಬಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ 82 ರನ್‌ ಸೇರಿಸಿ ತಂಡವು ಹೋರಾಟದ ಮೊತ್ತ ಗಳಿಸಲು ಕಾರಣರಾದರು. ಮುಂಬೈ ತಂಡದ ಸೈಕಾ ಮೂರು, ಅಮೆಲಿಯಾ ಎರಡು ಹಾಗೂ ಹೆಯಲಿ ಮ್ಯಾಥ್ಯೂಸ್ ಒಂದು ವಿಕೆಟ್ ಗಳಿಸಿದರು. ಸಂಕ್ಷಿಪ್ತ ಸ್ಕೋರು: ಯುಪಿ ವಾರಿಯರ್ಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 159 (ಅಲೀಸಾ ಹೀಲಿ 58, ಕಿರಣ್ ನವಗಿರೆ 17, ತಹಿಲಾ ಮೆಕ್‌ಗ್ರಾ 50, ಸೈಕಾ ಇಷ್ಕೀ 33ಕ್ಕೆ3, ಅಮೆಲಾ ಕೆರ್ 33ಕ್ಕೆ2) ಮುಂಬೈ ಇಂಡಿಯನ್ಸ್: 17.3 ಓವರ್‌ಗಳಲ್ಲಿ 2 ವಿಕೆಟ್‌ಗೆ 164 (ಯಷ್ಟಿಕಾ ಭಾಟಿಯಾ 42, ನತಾಲಿ ಸಿವೆರ್ ಬ್ರಂಟ್‌ ಔಟಾಗದೆ 45, ಹರ್ಮನ್‌ಪ್ರೀತ್ ಕೌರ್ ಔಟಾಗದೆ 53; ರಾಜೇಶ್ವರಿ ಗಾಯಕವಾಡ 33ಕ್ಕೆ 1, ಸೋಫಿ ಎಕ್ಲೆಸ್ಟೋನ್ 30ಕ್ಕೆ 1). ಫಲಿತಾಂಶ: ಮುಂಬೈ ಇಂಡಿಯನ್ಸ್ ತಂಡಕ್ಕೆ ಎಂಟು ವಿಕೆಟ್‌ಗಳ ಜಯ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.