ಆರ್‌ಸಿಬಿ ನಾಯಕತ್ವ ಬಿಟ್ಟ ಕಾರಣ ಬಿಚ್ಚಿಟ್ಟ ವಿರಾಟ್ ನವದೆಹಲಿ: ಎರಡು ವರ್ಷಗಳ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನು ಬಿಟ್ಟುಕೊಟ್ಟಿದ್ದ ಕಾರಣವನ್ನು ವಿರಾಟ್ ಕೊಹ್ಲಿ ಬಿಚ್ಚಿಟ್ಟರು. ‘ಆ ಸಂದರ್ಭದಲ್ಲಿ ನನ್ನ ಮೇಲೆ ನನಗೇ ನಂಬಿಕೆ ಉಳಿದಿರಲಿಲ್ಲವೆಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ. ನನ್ನ ಬತ್ತಳಿಕೆಯೂ ಬರಿದಾಗಿತ್ತು. ಹೊಣೆಯನ್ನು ಇನ್ನು ಮುಂದೆ ನಿರ್ವಹಿಸಲು ನನಗೇ ಅನಿಸುತ್ತಿತ್ತು. ಆದ್ದರಿಂದ ನಾಯಕತ್ವ ಬಿಟ್ಟುಬಿಡುವ ನಿರ್ಧಾರ ಕೈಗೊಂಡೆ’ ಎಂದು ಆರ್‌ಸಿಬಿ ಮಹಿಳಾ ತಂಡದೊಂದಿಗೆ ಬುಧವಾರ ನಡೆದಿದ್ದ ಸಂವಾದದಲ್ಲಿ ಹೇಳಿದರು. ‘ನಾನು ವಿರಾಟ್ ಕೊಹ್ಲಿ. ನನ್ನ ಅನುಭವ, ಪ್ರತಿಷ್ಠೆಗಳಿಗೆ ತಕ್ಕಂತೆ ಆಡಲೇಬೇಕು ಎಂಬ ಭಾವ ಸದಾ ಕಾಡುತ್ತಿತ್ತು. ಇದು ಒತ್ತಡ ಹೆಚ್ಚಿಸಿತ್ತು. ಇದರಿಂದಾಗಿ ಅಭದ್ರತೆಯ ಕ್ಷಣಗಳನ್ನು ಎದುರಿಸಿದ್ದೇನೆ. ಅದರಿಂದಾಗಿ ನೈಜ ಆಟವಾಡದೇ ಎಡವಿದ್ದೇನೆ. ಆದರೆ ಹೊಸ ಪ್ರತಿಭಾವಂತರೊಂದಿಗಿನ ಒಡನಾಟವು ನನ್ನಲ್ಲಿ ಹೊಸ ಚೈತನ್ಯ ಮೂಡಿಸುತ್ತಿತ್ತು’ ಎಂದು ನೆನಪಿಸಿಕೊಂಡಿದ್ದಾರೆ. ‘ಹೊಸಬರು ತಂಡದೊಳಗೆ ಬಂದಾಗ ನೂತನ ವಿಚಾರಗಳೂ ಬರುತ್ತವೆ. ಅದರಿಂದ ತಂಡದ ಸಾಮರ್ಥ್ಯ ಹೆಚ್ಚುತ್ತದೆ. ಹೊಸಬರಿಗೂ ತಮ್ಮ ಸಾಮರ್ಥ್ಯವನ್ನು ತೋರುವ ಹುಮ್ಮಸ್ಸು ಇರುತ್ತದೆ. ನಮ್ಮ ತಂಡವು ಇಂತಹ ಯೋಜನೆಯಿಂದಾಗಿ ಸತತ ಮೂರು ಬಾರಿ ಪ್ಲೇ ಆಫ್ ಪ್ರವೇಶಿಸಿತ್ತು’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.