ಅವಕಾಶದ ನಿರೀಕ್ಷೆಯಲ್ಲಿ ಕುಲದೀಪ್, ಚಾಹಲ್ ಮುಂಬೈ: ಸ್ಪಿನ್ ಜೋಡಿ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯಲ್ಲಿ ಮಿಂಚುವ ಭರವಸೆಯಲ್ಲಿದ್ದಾರೆ. 2019ರಿಂದ ಇಲ್ಲಿಯವರೆಗೆ ಈ ಜೋಡಿಯು ಬಹಳಷ್ಟು ಏಳುಬೀಳುಗಳನ್ನು ಕಂಡಿದೆ. ಚೈನಾಮೆನ್ ಬೌಲರ್ ಕುಲದೀಪ್ 2021ರಲ್ಲಿ ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಪಡೆದುಕೊಂಡರು. ಈ ಗಾಯದಿಂದಾಗಿ ಅವರ ವೃತ್ತಿಜೀವನ ಕೊನೆಗೊಳ್ಳುವ ಆತಂಕವಿತ್ತು. ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಂಡು ಕಣಕ್ಕೆ ಮರಳಿದ್ದ ಕುಲದೀಪ್ ಮಿಂಚಿದ್ದರು. ಆದರೆ ಯಜುವೇಂದ್ರ ಚಾಹಲ್ ಅವರನ್ನು ಪ್ರಮುಖ ಟಿ20 ಪಂದ್ಯಗಳಲ್ಲಿ ಆಯ್ಕೆಗೆ ಪರಿಗಣಿಸಿರಲಿಲ್ಲ. ಅಲ್ಲದೇ ವಿಶ್ವಕಪ್ ಟೂರ್ನಿಗಳಲ್ಲಿಯೂ ಅವರಿಗೆ ಆದ್ಯತೆ ಕೊಟ್ಟಿರಲಿಲ್ಲ. ಈ ವರ್ಷ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗಾಗಿ ಸಿದ್ಧಗೊಳ್ಳಲಿರುವ ತಂಡಕ್ಕೆ ಆಸ್ಟ್ರೇಲಿಯಾ ಎದುರಿನ ಸರಣಿಯು ಪ್ರಮುಖವಾಗಿದೆ. ಇದೇ 17ರಂದು ಸರಣಿಯ ಮೊದಲ ಪಂದ್ಯವು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಅದಕ್ಕಾಗಿ ಬುಧವಾರದಿಂದ ತಂಡವು ಅಭ್ಯಾಸ ಆರಂಭಿಸಿದೆ. ಕುಲದೀಪ್ ಮತ್ತು ಚಾಹಲ್ ಹೆಚ್ಚು ಹೊತ್ತು ಬೌಲಿಂಗ್ ಅಭ್ಯಾಸ ನಡೆಸಿದರು. ತಂಡದ ಹಂಗಾಮಿ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಈ ಸಂದರ್ಭದಲ್ಲಿ ತಾಲೀಮು ನಡೆಸಿದರು. ರೋಹಿತ್ ಶರ್ಮಾ ಅವರು ಕೌಟುಂಬಿಕ ಕಾರಣಗಳಿಗಾಗಿ ಬಿಡುವು ಪಡೆದಿದ್ದಾರೆ. ಆದರೆ ಎಲ್ಲರ ಕಣ್ಣು ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜ ಮತ್ತು ವಾಷಿಂಗ್ಟನ್ ಸುಂದರ್ ಅವರ ಮೇಲಿತ್ತು. ಇವರಿಬ್ಬರೊಂದಿಗೆ ಕುಲದೀಪ್ ಮತ್ತು ಚಾಹಲ್ ಅವರು ಈಗ ಸ್ಪರ್ಧೆ ಮಾಡಬೇಕಿದೆ. ಕಣಕ್ಕಿಳಿಯುವ ಹನ್ನೊಂದರಲ್ಲಿ ಸ್ಥಾನ ಮಾಡಿಕೊಳ್ಳಬೇಕಿದೆ. ಆದರೆ, ಜಡೇಜ ಹಾಗೂ ವಾಷಿಂಗ್ಟನ್ ಅವರಿಗೆ ಸ್ಪಿನ್ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಕೂಡ ಕರಗತವಾಗಿದೆ. ಅದರಿಂದಾಗಿ ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದ ಎದುರು ಆಲ್‌ರೌಂಡರ್‌ಗಳಿಗೆ ಹೆಚ್ಚು ಅವಕಾಶ ಲಭಿಸುವ ಸಾಧ್ಯತೆ ಹೆಚ್ಚು. ಈ ಅಭ್ಯಾಸದ ಅವಧಿಯಲ್ಲಿ ವೇಗಿಗಳಾದ ಮೊಹಮ್ಮದ್ ಸಿರಾಜ್, ಜೈದೇವ್ ಉನದ್ಕತ್, ಉಮ್ರಾನ್ ಮಲಿಕ್, ಶಾರ್ದೂಲ್ ಠಾಕೂರ್, ಬ್ಯಾಟರ್‌ ಸೂರ್ಯಕುಮಾರ್ ಯಾದವ್ ಹಾಗೂ ವಿಕೆಟ್‌ಕೀಪರ್ ಇಶಾನ್ ಕಿಶನ್ ಕೂಡ ಇದ್ದರು. ಮುಖ್ಯ ಕೋಚ್ ರಾಹುಲ್ ದ್ರಾವಿಡ್ , ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್, ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಹಾಗೂ ಬೌಲಿಂಗ್ ತರಬೇತುದಾರ ಪಾರಸ್ ಮಾಂಬ್ರೆ, ಥ್ರೋಡೌನ್ ಪರಿಣತರಾದ ರಾಘವೇಂದ್ರ ಮತ್ತು ನುವಾನ್ ಸೆನೆವಿರತ್ನೆ ಇದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.