ಫುಟ್‌ಬಾಲ್‌: ಕರ್ನಾಟಕಕ್ಕೆ ಗೆಲುವು ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ಕರ್ನಾಟಕ ತಂಡದವರು 27ನೇ ಸೀನಿಯರ್‌ ಮಹಿಳೆಯರ ರಾಷ್ಟ್ರೀಯ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಗೆಲುವು ಸಾಧಿಸಿದರು. ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಆತಿಥೇಯ ತಂಡ 3–1 ಗೋಲುಗಳಿಂದ ಅಸ್ಸಾಂ ತಂಡವನ್ನು ಮಣಿಸಿತು. ಮೈತ್ರೇಯಿ ಪಾಲಸಮುದ್ರಂ ಅವರು 9ನೇ ನಿಮಿಷದಲ್ಲಿ ಕರ್ನಾಟಕದ ಗೋಲಿನ ಖಾತೆ ತೆರೆದರೆ, 13ನೇ ನಿಮಿಷದಲ್ಲಿ ಸೋನಿಯಾ ಅವರು ಮುನ್ನಡೆ ಹೆಚ್ಚಿಸಿದರು. ಇನ್ನೊಂದು ಗೋಲನ್ನು ಸಂಜಿತಾ ನಿರೋಲಾ (48ನೇ ನಿ.) ಎರಡನೇ ಅವಧಿಯಲ್ಲಿ ತಂದುಕೊಟ್ಟರು. ಅಸ್ಸಾಂ ತಂಡದ ಏಕೈಕ ಗೋಲನ್ನು ಯಾಂಗೊಜಾಮ್ ಕಿರಣ್‌ ಬಾಲಾ ಚಾನು 87ನೇ ನಿಮಿಷದಲ್ಲಿ ಗಳಿಸಿದರು. ಖುಷ್ಬೂ ಸರೋಜ್ ಹ್ಯಾಟ್ರಿಕ್‌ ಸಾಧನೆ : ಬೆಳಿಗ್ಗೆ ನಡೆದ ಪಂದ್ಯದಲ್ಲಿ ಗುಜರಾತ್‌ 3–0 ಗೋಲುಗಳಿಂದ ಬಿಹಾರ ತಂಡವನ್ನು ಮಣಿಸಿತು. ವಿಜಯಿ ತಂಡದ ಖುಷ್ಬೂ ಸರೋಜ್‌, ಟೂರ್ನಿಯ ಮೊದಲ ಹ್ಯಾಟ್ರಿಕ್‌ ಸಾಧನೆ ಮಾಡಿದರು. ಅವರು 40, 50 ಮತ್ತು 66ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ಭಾನುವಾರ ನಡೆಯಲಿರುವ ಪಂದ್ಯಗಳಲ್ಲಿ ಮಣಿಪುರ– ಗುಜರಾತ್‌ ಮತ್ತು ಅಸ್ಸಾಂ– ಬಿಹಾರ ತಂಡಗಳು ಎದುರಾಗಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.