: ಬೆಂಗಳೂರಿಗೆ ‘ಮುಂಬೈ’ ಚಾಲೆಂಜ್ ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದರೆ ಕ್ರಿಕೆಟ್ ತಂಡವಷ್ಟೇ ಅಲ್ಲ. ಅಪಾರ ಸಂಖ್ಯೆಯ ಅಭಿಮಾನಿಗಳ ‘ಬೇಷರತ್‌ ಪ್ರೀತಿ’ಯ ದ್ಯೋತಕ. ಸತತ ಹದಿನೈದು ಟೂರ್ನಿಗಳಲ್ಲಿ ಪ್ರಶಸ್ತಿ ಗೆಲ್ಲದಿದ್ದರೂ ಪ್ರತಿವರ್ಷವೂ ಅಭಿಮಾನಿಗಳ ಬಳಗ ಹೆಚ್ಚುತ್ತಲೇ ಹೋಗುತ್ತಿರುವ ವಿಶಿಷ್ಟ ತಂಡ ಇದು. ಬೆಂಗಳೂರಿನಲ್ಲಿ ನಡೆಯುವ ಯಾವುದೇ ಅಂತರರಾಷ್ಟ್ರೀಯ ಅಥವಾ ದೇಶಿ ಕ್ರಿಕೆಟ್ ಪಂದ್ಯದಲ್ಲಿಯೂ ‘ಆರ್‌ಸಿಬಿ..ಆರ್‌ಸಿಬಿ..’ ಎಂದು ದಿನವಿಡೀ ಘೋಷಣೆ ಕೂಗುವ ಅಭಿಮಾನಿಗಳಿದ್ದಾರೆ. ಈಗ ಅದೇ ಆರ್‌ಸಿಬಿಯು ಹೊಸ ಕನಸಿನೊಂದಿಗೆ ಕಣಕ್ಕಿಳಿಯಲು ಸಿದ್ಧವಾಗಿದೆ. ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐದು ಪ್ರಶಸ್ತಿ ವಿಜೇತ ಮುಂಬೈ ಇಂಡಿಯನ್ಸ್ ಬಳಗವನ್ನು ಎದುರಿಸಲಿದೆ. ಮೂರು ವರ್ಷಗಳ ನಂತರ ಉದ್ಯಾನನಗರಿಗೆ ಮರಳಿರುವ ಐಪಿಎಲ್‌ ಪಂದ್ಯದ ಟಿಕೆಟ್‌ಗಳನ್ನು ಅಭಿಮಾನಿಗಳು ಮುಗಿಬಿದ್ದು ಖರೀದಿಸಿದ್ದಾರೆ. ಇದರಿಂದಾಗಿ ಕ್ರೀಡಾಂಗಣದ ಗ್ಯಾಲರಿಗಳು ಜನರಿಂದ ತುಂಬಿ ತುಳುಕುವುದು ಖಚಿತವಾಗಿದೆ. ಹೋದ ವರ್ಷ ಕೋವಿಡ್ ನಿಯಂತ್ರಣ ನಿಯಮಗಳು ಸಡಿಲಗೊಂಡ ನಂತರ ಇಲ್ಲಿ ನಡೆದಿದ್ದ ಪಿಂಕ್‌ ಬಾಲ್ ಟೆಸ್ಟ್ ಪಂದ್ಯವನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ಪಂದ್ಯದಲ್ಲಿ ಗೆದ್ದು ತನ್ನ ಅಭಿಮಾನಿಗಳ ಸಂತಸವನ್ನು ಹೆಚ್ಚಿಸುವ ಛಲದಲ್ಲಿ ಆತಿಥೇಯ ತಂಡವಿದೆ. ಉಭಯ ತಂಡಗಳ ನಡುವೆ ಈ ಹಿಂದೆ ನಡೆದಿರುವ ಐದು ಮುಖಾಮುಖಿಗಳಲ್ಲಿ ಆರ್‌ಸಿಬಿಯು ಸತತ ಮೂರು ಪಂದ್ಯಗಳಲ್ಲಿ ಜಯಿಸಿತ್ತು. ಅದರಿಂದಾಗಿ ಬೆಂಗಳೂರು ಅಪಾರ ಆತ್ಮವಿಶ್ವಾಸದಲ್ಲಿದೆ. ತಂಡದ ನಿಕಟಪೂರ್ವ ನಾಯಕ ವಿರಾಟ್ ಕೊಹ್ಲಿ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಅವರು ಈಚೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನ ಎಲ್ಲ ಮಾದರಿಗಳಲ್ಲಿಯೂ ಲಯ ಕಂಡುಕೊಂಡಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಫಾರ್ಮ್‌ಗಾಗಿ ಪರದಾಡಿದ್ದ ಅವರು ತಮ್ಮ ನೈಜ ಆಟಕ್ಕೆ ಮರಳಿದ್ದಾರೆ. ಫಫ್ ಮತ್ತು ವಿರಾಟ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಆದರೆ ಹೋದ ವರ್ಷದ ಟೂರ್ನಿಯಲ್ಲಿ 333 ರನ್ ಗಳಿಸಿ ಮಿಂಚಿದ್ದ ಬ್ಯಾಟರ್ ರಜತ್ ಪಾಟೀದಾರ್ ಮತ್ತು ಬೌಲರ್ ಜೋಶ್ ಹ್ಯಾಜಲ್‌ವುಡ್ ಆಡುತ್ತಿಲ್ಲ. ಗಾಯಗೊಂಡಿರುವ ಅವರು ಲೀಗ್ ಹಂತದ ಕೆಲವು ಪಂದ್ಯಗಳಲ್ಲಿ ಕಣಕ್ಕಿಳಿಯುತ್ತಿಲ್ಲ. ಅದರಿಂದಾಗಿ ಮಧ್ಯಮ ಕ್ರಮಾಂಕದಲ್ಲಿ ಆರ್‌ಸಿಬಿಯು ದಿನೇಶ್ ಕಾರ್ತಿಕ್ ಹಾಗೂ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟಿದೆ. ‘ಗ್ಲೆನ್ ಸಂಪೂರ್ಣ ಫಿಟ್‌ ಆಗಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ಎಲ್ಲ ತಪಾಸಣೆಗಳ ನಂತರವೇ ಅವರಿಗೆ ನೀರಾಕ್ಷೇಪಣಾ ಪತ್ರ ನೀಡಿದೆ. ಅವರು ಉತ್ತಮವಾಗಿ ಆಡುವ ಭರವಸೆ ಇದೆ’ ಎಂದು ತಂಡದ ಕೋಚ್ ಸಂಜಯ್ ಬಾಂಗರ್ ಹೇಳಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ಹರ್ಷಲ್ ಪಟೇಲ್ ಅವರಿಂದ ಹೆಚ್ಚಿನ ನಿರೀಕ್ಷೆ ಇದೆ. ಸೂರ್ಯ ಸವಾಲು: ಮುಂಬೈ ತಂಡದ ‘ಮಿಸ್ಟರ್ 360 ಡಿಗ್ರಿ’ ಖ್ಯಾತಿಯ ಬ್ಯಾಟರ್ ಸೂರ್ಯಕುಮಾರ್ ಯಾದವ್ ಪ್ರಮುಖ ಅವರಿಗೆ ಈಗ ಲಯಕ್ಕೆ ಮರಳುವ ಸವಾಲು ಇದೆ. ಇತ್ತೀಚೆಗೆ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಏಕದಿನ ಕ್ರಿಕೆಟ್ ಸರಣಿಯ ಮೂರು ಪಂದ್ಯಗಳಲ್ಲಿಯೂ ಸೊನ್ನೆ ಸುತ್ತಿದ್ದರು. ಅವರು ತಮ್ಮ ಲಯಕ್ಕೆ ಮರಳಲು ಐಪಿಎಲ್ ವೇದಿಕೆಯಾಗುವ ನಿರೀಕ್ಷೆ ಇದೆ. ನಾಯಕ ರೋಹಿತ್, ಟಿಮ್ ಡೇವಿಡ್, ತಿಲಕ್ ವರ್ಮಾ, ಇಶಾನ್ ಕಿಶನ್, ಕ್ಯಾಮರಾನ್ ಗ್ರೀನ್ ಅವರು ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಈ ಬಾರಿ ತಂಡಕ್ಕೆ ಕಾಡಲಿರುವ ಜಸ್‌ಪ್ರೀತ್ ಬೂಮ್ರಾ ಗೈರುಹಾಜರಿಯ ಕೊರತೆಯನ್ನು ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ನಿವಾರಿಸುವ ಸಾಧ್ಯತೆ ಇದೆ. ಅನುಭವಿ ಸ್ಪಿನ್ನರ್ ಪಿಯೂಷ್ ಚಾವ್ಲಾ ಕೂಡ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಬಹುದು. ಮುಂಬೈ ತಂಡವು ಹೋದ ವರ್ಷದ ಲೀಗ್ ಹಂತದ 14 ಪಂದ್ಯಗಳಲ್ಲಿ ಕೇವಲ ನಾಲ್ಕರಲ್ಲಿ ಜಯಿಸಿತ್ತು. ಆರ್‌ಸಿಬಿ ಪ್ಲೇಆಫ್‌ ಪ್ರವೇಶಿಸಿತ್ತು. ತಂಡಗಳು: ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಫ್ ಡುಪ್ಲೆಸಿ (ನಾಯಕ), ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೆಲ್, ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್), ಶಹಬಾಜ್ ಅಹಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೊರ್, ಫಿನ್ ಅಲೆನ್, ಸುಯಶ್ ಪ್ರಭುದೇಸಾಯಿ, ಕರ್ಣ ಶರ್ಮಾ, ಸಿದ್ಧಾರ್ಥ್ ಕೌಲ್, ಡೇವಿಡ್ ವಿಲಿ, ರೀಸ್ ಟಾಪ್ಲಿ, ಹಿಮಾಂಶು ಶರ್ಮಾ, ಮನೋಜ್ ಬಾಂಢಗೆ, ರಾಜನ್‌ ಕುಮಾರ್, ಅವಿನಾಶ್ ಸಿಂಗ್, ಸೋನು ಯಾದವ್, ಮಿಚೆಲ್ ಬ್ರೇಸ್‌ವೆಲ್. ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ಡೇವಿಡ್ ಬ್ರೆವಿಸ್, ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್‌ಕೀಪರ್), ಟ್ರಿಸ್ಟನ್ ಸ್ಟಬ್ಸ್, ವಿಷ್ಣು ವಿನೋದ್, ಕ್ಯಾಮೆರಾನ್ ಗ್ರೀನ್, ಅರ್ಜುನ್ ತೆಂಡೂಲ್ಕರ್, ರಮಣದೀಪ್ ಸಿಂಗ್, ಶಮ್ಸ್ ಮುಲಾನಿ, ನೇಹಲ್ ವಡೇರಾ, ಹೃತಿಕ್ ಶೊಕೀನ್, ಅರ್ಷದ್ ಖಾನ್, ಡಾನ್ ಜೇನ್ಸನ್, ಪಿಯೂಷ್ ಚಾವ್ಲಾ, ಕುಮಾರ್ ಕಾರ್ತಿಕೆಯ, ರಾಘವ್ ಗೋಯಲ್, ಜೋಫ್ರಾ ಆರ್ಚರ್, ಜೇಸನ್ ಬೆಹ್ರೆನ್‌ಡ್ರಾಫ್, ಆಕಾಶ್ ಮದವಾಲ್. ಪಂದ್ಯ ಆರಂಭ: ರಾತ್ರಿ 7.30ರಿಂದ ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊ ಸ್ಪೋರ್ಟ್ಸ್‌ ಆ್ಯಪ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.