ಐಪಿಎಲ್ 2023: ಎಲ್‌ಎಸ್‌ಜಿ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಸೂಪರ್ ಜಯ ಚೆನ್ನೈ (ಪಿಟಿಐ): ಆರಂಭಿಕ ಬ್ಯಾಟರ್‌ಗಳ ಅಬ್ಬರದ ಆಟ ಹಾಗೂ ಮೊಯೀನ್ ಅಲಿ ಅವರ ಸ್ಪಿನ್ ಮೋಡಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲುವು ತಂದುಕೊಟ್ಟವು. ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಚೆನ್ನೈ 12 ರನ್‌ಗಳಿಂದ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮಣಿಸಿತು. ಇದರೊಂದಿಗೆ ಟೂರ್ನಿಯಲ್ಲಿ ಮೊದಲ ಜಯದ ಸಿಹಿ ಸವಿಯಿತು. ಮೊದಲು ಬ್ಯಾಟ್‌ ಮಾಡಿದ ಮಹೇಂದ್ರ ಸಿಂಗ್‌ ಧೋನಿ ಬಳಗ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 217 ರನ್‌ ಪೇರಿಸಿತು. ಲಖನೌ ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ಗೆ 205 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಬೃಹತ್ ಮೊತ್ತ ಬೆನ್ನಟ್ಟಿದ ಕೆ.ಎಲ್‌.ರಾಹುಲ್ ನಾಯಕತ್ವದ ಲಖನೌ ತಂಡಕ್ಕೆ ಭರ್ಜರಿ ಆರಂಭವೇ ಸಿಕ್ಕಿತು. ರಾಹುಲ್ (20, 18ಎ, 4X2) ಹಾಗೂ ಕೈಲ್ ಮೇಯರ್ಸ್ (53, 22ಎ) ಮೊದಲ ವಿಕೆಟ್‌ ಜೊತೆಯಾಟದಲ್ಲಿ 5.3 ಓವರ್‌ಗಳನ್ನು ಆಡಿ 79 ರನ್‌ ಸೇರಿಸಿದರು. ಮೋಯಿನ್ ಅಲಿ (26ಕ್ಕೆ 4) ಅವರಿಗೆ ಮೊದಲ ವಿಕೆಟ್‌ ಆಗಿ ಔಟಾಗುವ ಮುನ್ನ ಮೇಯರ್ಸ್ ಎಂಟು ಬೌಂಡರಿ, ಎರಡು ಸಿಕ್ಸರ್ ಸಿಡಿಸಿದರು. ಮೇಯರ್ಸ್ ವಿಕೆಟ್‌ ಪತನದ ಬಳಿಕ ದೀಪಕ್ ಹೂಡಾ (2), ರಾಹುಲ್‌ ಮತ್ತು ಕೃಣಾಲ್ ಪಾಂಡ್ಯ (9) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್‌ ಸ್ಟೊಯಿನಿಸ್‌ (21), ನಿಕೊಲಸ್‌ ಪೂರನ್‌ (32), ಆಯುಷ್ ಬಡೋಣಿ (23) ಮತ್ತು ಕೆ. ಗೌತಮ್ (ಔಟಾಗದೆ 17 ) ಲಖನೌ ಜಯದ ಆಸೆ ಚಿಗುರಿಸಿದ್ದರು. ಆದರೆ ಚೆನ್ನೈ ಬೌಲರ್‌ಗಳ ಚಾಣಾಕ್ಷತನದ ಬೌಲಿಂಗ್ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಚೆನ್ನೈ ತಂಡದ ತುಷಾರ್ ದೇಶಪಾಂಡೆ (45ಕ್ಕೆ 2) ಎರಡು ವಿಕೆಟ್‌ ಗಳಿಸಿದರು. ಚೆನ್ನೈಗೂ ಉತ್ತಮ ಆರಂಭ: ಋತುರಾಜ್‌ ಗಾಯಕವಾಡ್‌ (57 ರನ್‌, 31 ಎ., 4X3, 6X4), ಡೆವೊನ್‌ ಕಾನ್ವೆ (47 ರನ್‌, 29 ಎ., 4X5, 6X2) ಮತ್ತು ಕೊನೆಯಲ್ಲಿ ಅಂಬಟಿ ರಾಯುಡು (ಅಜೇಯ 27 ರನ್‌, 14 ಎ., 4X2, 6X2) ಅವರು ಚೆನ್ನೈ ತಂಡದ ದೊಡ್ಡ ಮೊತ್ತಕ್ಕೆ ಕಾರಣರಾದರು. ಟಾಸ್‌ ಗೆದ್ದ ಸೂಪರ್ ಜೈಂಟ್ಸ್‌ ತಂಡದ ನಾಯಕ ಕೆ.ಎಲ್‌.ರಾಹುಲ್‌ ಅವರು ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಕಳುಹಿಸಿದರು. ಆದರೆ ಅವರ ನಿರ್ಧಾರವನ್ನು ಚೆನ್ನೈ ತಂಡದ ಋತುರಾಜ್‌ ಮತ್ತು ಕಾನ್ವೆ ತಲೆಕೆಳಗಾಗಿಸಿದರು. ಮೊದಲ ವಿಕೆಟ್‌ಗೆ 9.1 ಓವರ್‌ಗಳಲ್ಲಿ 110 ರನ್‌ ಸೇರಿಸಿ ಭರ್ಜರಿ ಆರಂಭ ನೀಡಿದರು. ಇವರ ಅಬ್ಬರದ ಆಟದಿಂದ ಎಂಟು ಓವರ್‌ಗಳಲ್ಲೇ ತಂಡದ ಮೊತ್ತ 100ರ ಗಡಿ ದಾಟಿತು. 10ನೇ ಓವರ್‌ನ ಮೊದಲ ಎಸೆತದಲ್ಲಿ ಋತುರಾಜ್‌ ವಿಕೆಟ್‌ ಪಡೆದ ರವಿ ಬಿಷ್ಣೋಯಿ ಈ ಜತೆಯಾಟ ಮುರಿದರು. ಗುಜರಾತ್‌ ಟೈಟನ್ಸ್‌ ವಿರುದ್ಧದ ಮೊದಲ ಪಂದ್ಯದಲ್ಲಿ 50 ಎಸೆತಗಳಲ್ಲಿ 92 ರನ್‌ ಗಳಿಸಿದ್ದ ಋತುರಾಜ್‌, ಸತತ ಎರಡನೇ ಅರ್ಧಶತಕ ಗಳಿಸಿದರು. ಅಲ್ವ ಸಮಯದ ಬಳಿಕ ಕಾನ್ವೆ ಕೂಡಾ ಪೆವಿಲಿಯನ್‌ಗೆ ಮರಳಿದರು. ಮಾರ್ಕ್‌ ವುಡ್‌ ಎಸೆತದಲ್ಲಿ ಕೃಣಾಲ್‌ ಪಾಂಡ್ಯಗೆ ಕ್ಯಾಚಿತ್ತರು. ಎರಡು ವಿಕೆಟ್‌ ಬಿದ್ದರೂ ಶಿವಂ ದುಬೆ (27 ರನ್‌, 16 ಎ.) ಮತ್ತು ಮೊಯೀನ್‌ ಅಲಿ (19 ರನ್‌, 13 ಎ.) ಅವರು ರನ್‌ರೇಟ್‌ ತಗ್ಗದಂತೆ ನೋಡಿಕೊಂಡರು. ಕೊನೆಯಲ್ಲಿ ರಾಯುಡು ರಟ್ಟೆಯರಳಿಸಿದ್ದರಿಂದ ತಂಡದ ಮೊತ್ತ 200ರ ಗಡಿ ದಾಟಿತು. ನಾಯಕ ಧೋನಿ (12 ರನ್‌, 3 ಎ., 6X2) ತಾವೆದುರಿಸಿದ ಮೊದಲ ಎರಡು ಎಸೆತಗಳಲ್ಲಿ ಸಿಕ್ಸರ್‌ ಹೊಡೆದು ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಮೂರನೇ ಎಸೆತದಲ್ಲಿ ಔಟಾದರು. ರವಿ ಬಿಷ್ಣೋಯಿ (28ಕ್ಕೆ 3) ಹೊರತುಪಡಿಸಿ ಲಖನೌ ತಂಡದ ಇತರ ಬೌಲರ್‌ಗಳಿಗೆ ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಆಗಲಿಲ್ಲ. ಮಾರ್ಕ್‌ ವುಡ್‌ ಮೂರು ವಿಕೆಟ್‌ ಪಡೆದರೂ, ನಾಲ್ಕು ಓವರ್‌ಗಳಲ್ಲಿ 49 ರನ್‌ ಬಿಟ್ಟುಕೊಟ್ಟರು. ಅಂಗಳದಲ್ಲಿ ಓಡಾಡಿದ ಶ್ವಾನ: ಪಂದ್ಯದ ಆರಂಭಕ್ಕೆ ಮುನ್ನ ನಾಯಿಯೊಂದು ಅಂಗಳದಲ್ಲಿ ಕಾಣಿಸಿಕೊಂಡಿತು. ಆಟ ಗಾರರು ಮತ್ತು ಅಂಪೈರ್‌ ಅದನ್ನು ಹೊರಗೆ ಓಡಿಸಲು ಪ್ರಯತ್ನಿಸಿ ವಿಫಲರಾದರು. ಅಂಗಳದ ಸಿಬ್ಬಂದಿ ಕೊನೆಗೂ ನಾಯಿಯನ್ನು ಹೊರಕ್ಕೆ ಓಡಿಸಲು ಯಶಸ್ವಿಯಾದರು. ಇದರಿಂದ ಪಂದ್ಯ ಐದು ನಿಮಿಷ ತಡವಾಗಿ ಆರಂಭ ವಾಯಿತು. ಸಂಕ್ಷಿಪ್ತ ಸ್ಕೋರ್‌: ಚೆನ್ನೈ ಸೂಪರ್ ಕಿಂಗ್ಸ್‌ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 217 (ಋತುರಾಜ್‌ ಗಾಯಕವಾಡ್‌ 57, ಡೆವೊನ್‌ ಕಾನ್ವೆ 47, ಶಿವಂ ದುಬೆ 27, ಮೊಯೀನ್‌ ಅಲಿ 19, ಬೆನ್‌ ಸ್ಟೋಕ್ಸ್‌ 8, ಅಂಬಟಿ ರಾಯುಡು ಔಟಾಗದೆ 27, ಮಹೇಂದ್ರ ಸಿಂಗ್‌ ಧೋನಿ 12, ರವಿ ಬಿಷ್ಣೋಯಿ 28ಕ್ಕೆ 3, ಮಾರ್ಕ್‌ ವುಡ್‌ 49ಕ್ಕೆ 3). ಲಖನೌ ಸೂಪರ್‌ ಜೈಂಟ್ಸ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 205 (ಕೆ.ಎಲ್.ರಾಹುಲ್ 20, ಕೈಲ್ ಮೇಯರ್ಸ್ 53, ಮಾರ್ಕಸ್‌ ಸ್ಟೊಯಿನಿಸ್‌ 21, ನಿಕೊಲಸ್‌ ಪೂರನ್‌ 32, ಆಯುಷ್ ಬಡೋಣಿ 23, ಕೆ.ಗೌತಮ್‌ ಔಟಾಗದೆ 17; ತುಷಾರ್ ದೇಶಪಾಂಡೆ 45ಕ್ಕೆ 2, ಮೊಯೀನ್‌ ಅಲಿ 26ಕ್ಕೆ 4). ಫಲಿತಾಂಶ: ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 12 ರನ್‌ಗಳ ಜಯ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.