ಏಕದಿನ ವಿಶ್ವಕಪ್‌ ಕ್ರಿಕೆಟ್‌ ಲೋಗೊ ಬಿಡುಗಡೆ ನವದೆಹಲಿ: ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಲೋಗೊವನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಬಿಡುಗಡೆಗೊಳಿಸಿದೆ. ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡ ಏಕದಿನ ವಿಶ್ವಕಪ್‌ ಜಯಿಸಿದ 12ನೇ ವರ್ಷಾಚರಣೆ ಸಂದರ್ಭದಲ್ಲೇ ಲೋಗೊ ಅನಾವರಣಗೊಳಿಸಿದೆ. ವಿಶ್ವಕಪ್‌ ಟೂರ್ನಿ ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳಲ್ಲಿ ನಡೆಯಲಿದೆ. ಪಂದ್ಯ ವೀಕ್ಷಿಸುವ ವೇಳೆ ಪ್ರೇಕ್ಷಕರಲ್ಲಿ ಉಂಟಾಗುವ ಭಾವನೆಗಳನ್ನು ಲೋಗೊ ಪ್ರತಿಬಿಂಬಿಸುತ್ತದೆ. ಸಂತಸ, ಶಕ್ತಿ, ನಿರಾಸೆ, ಗೌರವ, ಹೆಮ್ಮೆ, ಧೈರ್ಯ, ವೈಭವ, ವಿಸ್ಮಯ ಮತ್ತು ಉತ್ಸಾಹ... ಹೀಗೆ ‘ನವರಸ’ಗಳನ್ನು ಬಿಂಬಿಸುವ ಬಣ್ಣ ಮತ್ತು ವಿನ್ಯಾಸದಿಂದ ಲೋಗೊ ಸಿದ್ಧಪಡಿಸಲಾಗಿದೆ. ‘ವಿಶ್ವಕಪ್‌ ಟೂರ್ನಿಗೆ ಕೇವಲ ಆರು ತಿಂಗಳು ಮಾತ್ರ ಇದ್ದು ಕಾತರ, ಕುತೂಹಲ ಗರಿಗೆದರಿದೆ. ತವರು ನೆಲದಲ್ಲಿ ವಿಶ್ವಕಪ್‌ ಆಡಬೇಕು ಎಂಬುದು ಪ್ರತಿಯೊಬ್ಬ ಆಟಗಾರನ ಕನಸು. ನಾಯಕನಾಗಿ ಆಡುವುದು ಅದಕ್ಕೂ ಮಿಗಿಲಾದ ಅನುಭವ ನೀಡಲಿದೆ’ ಎಂದು ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಅವರು ಐಸಿಸಿ ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.