2023: ಆರ್‌ಸಿಬಿ ವೇಗಿ ರೀಸ್‌ ಟಾಪ್ಲಿಗೆ ಗಾಯ ಬೆಂಗಳೂರು: ಮುಂಬೈ ಇಂಡಿಯನ್ಸ್ ವಿರುದ್ಧ ಭಾನುವಾರ ನಡೆದ ಐಪಿಎಲ್‌ ಪಂದ್ಯದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಧ್ಯಮವೇಗಿ ರೀಸ್‌ ಟಾಪ್ಲಿ ಅವರ ಭುಜಕ್ಕೆ ಗಾಯವಾಗಿದೆ. ಇಲ್ಲಿ ನಡೆದಿದ್ದ ಪಂದ್ಯದಲ್ಲಿ ಬೌಂಡರಿ ತಡೆಯುವ ಯತ್ನದಲ್ಲಿ ಬಿದ್ದು ಇಂಗ್ಲೆಂಡ್ ಆಟಗಾರ ಟಾಪ್ಲಿ ಅವರ ಭುಜ‌ದ ಮೂಳೆ ಪಲ್ಲಟಗೊಂಡಿದೆ. ‘ಫೀಲ್ಡಿಂಗ್ ಸಂದರ್ಭದಲ್ಲಿ ದುರದೃಷ್ಟವಶಾತ್ ಟಾಪ್ಲಿ ಅವರ ಭುಜಕ್ಕೆ ಗಾಯವಾಗಿದೆ. ವೈದ್ಯರು ಅದನ್ನು ಮರು ಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಟಾಪ್ಲಿ ಆರೋಗ್ಯವಾಗಿದ್ದಾರೆ. ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ‘ ಎಂದು ಆರ್‌ಸಿಬಿ ಮುಖ್ಯ ಕೋಚ್‌ ಮೈಕ್ ಹೆಸನ್‌ ತಂಡದ ಯೂಟ್ಯೂಬ್ ಚಾನೆಲ್‌ಗೆ ತಿಳಿಸಿದ್ದಾರೆ. ಈ ಪಂದ್ಯದಲ್ಲಿ ಬೆಂಗಳೂರು ತಂಡವು ಎಂಟು ವಿಕೆಟ್‌ಗಳಿಂದ ಮುಂಬೈಗೆ ಸೋಲುಣಿಸಿತ್ತು. ಎರಡು ಓವರ್ ಬೌಲ್ ಮಾಡಿದ್ದ ಟಾಪ್ಲಿ 14 ರನ್‌ ನೀಡಿ 1 ವಿಕೆಟ್‌ ಗಳಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.