–2023 | ಗುಜರಾತ್‌ ವಿರುದ್ಧ ಇಂದು ಹಣಾಹಣಿ; ಪುಟಿದೇಳುವ ವಿಶ್ವಾಸದಲ್ಲಿ ಡೆಲ್ಲಿ ನವದೆಹಲಿ: ಮೊದಲ ಪಂದ್ಯದಲ್ಲಿ ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಐಪಿಎಲ್‌ ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ಮಂಗಳವಾರ ಗುಜರಾತ್‌ ಟೈಟನ್ಸ್‌ ತಂಡವನ್ನು ಎದುರಿಸಲಿದ್ದು, ಪುಟಿದೆದ್ದು ನಿಲ್ಲುವ ವಿಶ್ವಾಸದಲ್ಲಿದೆ. ಡೇವಿಡ್‌ ವಾರ್ನರ್‌ ನೇತೃತ್ವದ ಡೆಲ್ಲಿ ತಂಡ 50 ರನ್‌ಗಳಿಂದ ಲಖನೌ ಸೂಪರ್‌ ಜೈಂಟ್ಸ್‌ ತಂಡಕ್ಕೆ ಮಣಿದಿತ್ತು. ಗೊತ್ತುಗುರಿಯಿಲ್ಲದ ಬೌಲಿಂಗ್‌ ಮತ್ತು ಕಳಪೆ ಫೀಲ್ಡಿಂಗ್‌ ಮುಳುವಾಗಿ ಪರಿಣಮಿಸಿತ್ತು. ವೇಗದ ಬೌಲರ್‌ಗಳು ಹೆಚ್ಚಿನ ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಆದ್ದರಿಂದ ತಪ್ಪುಗಳನ್ನು ತಿದ್ದಿಕೊಂಡು ಶಿಸ್ತಿನ ದಾಳಿ ನಡೆಸುವ ಸವಾಲು ಬೌಲರ್‌ಗಳ ಮುಂದಿದೆ. ಚೇತನ್‌ ಸಕಾರಿಯಾ ಮತ್ತು ಮುಕೇಶ್‌ ಕುಮಾರ್‌ ದೇಸಿ ಕ್ರಿಕೆಟ್‌ನಲ್ಲಿ ಮಿಂಚಿದ್ದರೂ, ಅಂತರರಾಷ್ಟ್ರೀಯ ಬ್ಯಾಟರ್‌ಗಳನ್ನು ಕಾಡುವಂತಹ ವೇಗ ಮತ್ತು ವೈವಿಧ್ಯತೆ ಅವರ ಬೌಲಿಂಗ್‌ನಲ್ಲಿ ಕಾಣಿಸಿಲ್ಲ. ಸಕಾರಿಯಾ ಮೊದಲ ಪಂದ್ಯದಲ್ಲಿ ನಾಲ್ಕು ಓವರ್‌ಗಳಲ್ಲಿ 53 ರನ್‌ ಬಿಟ್ಟುಕೊಟ್ಟಿದ್ದರು. ದಕ್ಷಿಣ ಆಫ್ರಿಕಾದ ವೇಗಿಗಳಾದ ಎನ್ರಿಕ್‌ ನಾರ್ಕಿಯಾ ಮತ್ತು ಲುಂಗಿ ಗಿಡಿ ಅವರು ರಾಷ್ಟ್ರೀಯ ತಂಡಕ್ಕೆ ಆಡುತ್ತಿರುವ ಕಾರಣ ಈ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. ಮಂಗಳವಾರದ ಪಂದ್ಯದಲ್ಲಿ ಸಕಾರಿಯಾ ಬದಲು ಬಾಂಗ್ಲಾದೇಶದ ಮುಸ್ತಫಿಜುರ್‌ ರೆಹ ಮಾನ್‌ ಅವರಿಗೆ ಅವಕಾಶ ನೀಡುವ ಸಾಧ್ಯತೆಯಿದೆ. ಹಾಗಾದಲ್ಲಿ ರಿಲೀ ರೂಸೊ ಬೆಂಚ್‌ ಕಾಯಿಸಬೇಕಾಗಬಹುದು. ವಾರ್ನರ್‌ ಅವರು ಬ್ಯಾಟಿಂಗ್‌ನಲ್ಲಿ ಪೃಥ್ವಿ ಶಾ ಮತ್ತು ಸರ್ಫರಾಜ್ ಖಾನ್‌ ಅವರಿಂದ ಉತ್ತಮ ಆಟವನ್ನು ನಿರೀಕ್ಷಿಸುತ್ತಿದ್ದಾರೆ. ಲಖನೌ ವಿರುದ್ಧ ವಿಫಲರಾಗಿದ್ದ ಮಿಷೆಲ್‌ ಮಾರ್ಷ್‌ ಮತ್ತು ರೊವ್ಮನ್‌ ಪೊವೆಲ್‌ ಅವರು ಮಿಂಚಿದರಷ್ಟೇ ಡೆಲ್ಲಿಗೆ ಸವಾಲಿನ ಮೊತ್ತ ಕಲೆಹಾಕಲು ಸಾಧ್ಯ. ಭಾರತದ ಪ್ರಮುಖ ಆಟಗಾರರ ಕೊರತೆ ಡೆಲ್ಲಿ ತಂಡವನ್ನು ಕಾಡುತ್ತಿದೆ. ‘ಇಂಪ್ಯಾಕ್ಟ್‌ ಪ್ಲೇಯರ್’ ಆಗಿ ಕಣಕ್ಕಿಳಿಯಬಲ್ಲ ಸಮರ್ಥ ಆಟಗಾರರು ಕೂಡಾ ತಂಡದಲ್ಲಿಲ್ಲ. ಆದ್ದರಿಂದ ವಿದೇಶಿ ಆಟಗಾರರ ಪ್ರದರ್ಶನವೇ ನಿರ್ಣಾಯಕ ಎನಿಸಲಿದೆ. ಇನ್ನೊಂದೆಡೆ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮಣಿಸಿದ್ದ ಹಾಲಿ ಚಾಂಪಿಯನ್‌ ಟೈಟನ್ಸ್‌ ತಂಡದ ಆಟಗಾರರು ಆತ್ಮವಿಶ್ವಾಸದಲ್ಲಿದ್ದಾರೆ. ಕೇನ್‌ ವಿಲಿಯಮ್ಸನ್‌ ಅವರು ಗಾಯಗೊಂಡು ಟೂರ್ನಿಯಿಂದ ಹೊರಬಿದ್ದದ್ದು ತಂಡಕ್ಕೆ ಅಲ್ಪ ಹಿನ್ನಡೆ ಉಂಟುಮಾಡಿದೆ. ಮೊಹಮ್ಮದ್‌ ಶಮಿ, ಹಾರ್ದಿಕ್‌ ಪಾಂಡ್ಯ, ಅಲ್ಜರಿ ಜೋಸೆಫ್‌ ಮತ್ತು ರಶೀದ್‌ ಖಾನ್‌ ಅವರನ್ನೊಳಗೊಂಡ ಟೈಟನ್ಸ್‌ ಬೌಲಿಂಗ್‌ ವಿಭಾಗ, ಎದುರಾಳಿ ಬ್ಯಾಟರ್‌ಗಳಿಗೆ ಸವಾ ಲಾಗುವುದು ಖಚಿತ. ಪಂತ್ ಪಂದ್ಯ ವೀಕ್ಷಿಸುವ ಸಾಧ್ಯತೆ: ಕಾರು ಅಫಘಾತದಲ್ಲಿ ಗಾಯಗೊಂಡು ಚೇತರಿಸಿಕೊಳ್ಳುತ್ತಿರುವ ಡೆಲ್ಲಿ ತಂಡದ ಆಟಗಾರ ರಿಷಭ್ ಪಂತ್ ಡಗೌಟ್‌ನಲ್ಲಿ ಕುಳಿತು ಪಂದ್ಯ ವೀಕ್ಷಿಸುವ ಸಾಧ್ಯತೆಯಿದೆ. ಪಂದ್ಯ ಆರಂಭ: ರಾತ್ರಿ 7.30 ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.