2023: ಗುಜರಾತ್‌ಗೆ ಆಘಾತ, ಕೋಲ್ಕತ್ತ ನೈಟ್ ರೈಡರ್ಸ್‌ಗೆ ಐತಿಹಾಸಿಕ ಗೆಲುವು ಅಹಮದಾಬಾದ್: ರಿಂಕು ಸಿಂಗ್ ಸಿಡಿಸಿದ ಸತತ ಐದು ಸಿಕ್ಸರ್‌ಗಳ ಬಲದಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಎದುರು ರೋಚಕ ಜಯ ದಾಖಲಿಸಿತು. ಐಪಿಎಲ್‌ನಲ್ಲಿ ಹೊಸ ಇತಿಹಾಸ ರಚನೆಯಾಯಿತು. ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ಗುಜರಾತ್ ತಂಡವು ನೀಡಿದ್ದ 205 ರನ್‌ಗಳ ಗುರಿಯನ್ನು ಕೋಲ್ಕತ್ತ ಬೆನ್ನಟ್ಟಿತ್ತು. ಕೊನೆಯ ಓವರ್‌ನಲ್ಲಿ ಗೆಲುವಿಗೆ 29 ರನ್‌ಗಳ ಅಗತ್ಯವಿತ್ತು. ಬಹುತೇಕ ಅಸಾಧ್ಯ ಎಂಬಂತಿದ್ದ ಭಾವನೆಯನ್ನು ರಿಂಕು ತಲೆಕೆಳಗು ಮಾಡಿದರು. ಮಧ್ಯಮವೇಗಿ ಯಶ್ ದಯಾಳ್ 20ನೇ ಓವರ್‌ ಬೌಲಿಂಗ್ ಮಾಡಿದರು. ಅವರ ಮೊದಲ ಎಸೆತವನ್ನು ಎದುರಿಸಿದ ಉಮೇಶ್ ಯಾದವ್ ಒಂದು ರನ್‌ ಪಡೆಯುವಲ್ಲಿ ಯಶಸ್ವಿಯಾದರು. ಸ್ಟ್ರೈಕ್‌ಗೆ ಬಂದ ರಿಂಕು ಸಿಂಗ್ ಆಸಾಧ್ಯ ಸವಾಲನ್ನು ‘ಸಾಧ್ಯ’ ಮಾಡಿದರು. ನಂತರ ಐದು ಎಸೆತಗಳಲ್ಲಿಯೂ ಸಿಕ್ಸರ್‌ಗಳನ್ನು ಎತ್ತಿದರು. ಮೂರು ಫುಲ್‌ ಟಾಸ್, ಒಂದು ಲೆಂಗ್ತ್ ಮತ್ತು ಒಂದು ನಿಧಾನಗತಿಯ ಶಾರ್ಟ್‌ ಎಸೆತಗಳನ್ನು ಪ್ರೇಕ್ಷಕರ ಗ್ಯಾಲರಿಗೆ ಕಳಿಸುವಲ್ಲಿ ಎಡಗೈ ಬ್ಯಾಟರ್ ರಿಂಕು ಯಶಸ್ವಿಯಾದರು. ತಂಡ ಗೆಲುವು ಸಾಧಿಸುತ್ತಿದ್ದಂತೆಯೇ ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ಮತ್ತು ಸಹ ಆಟಗಾರರು ಕ್ರೀಡಾಂಗಣಕ್ಕೆ ಧಾವಿಸಿದರು. ರಿಂಕು ಸಿಂಗ್ ಅವರನ್ನು ಅಪ್ಪಿಕೊಂಡು ಸಂಭ್ರಮಿಸಿದರು. ಇತ್ತ ಯಶ್ ದಯಾಳ್ ಕಣ್ಣೀರು ಹಾಕುತ್ತ ಕುಸಿದರು. ಗುಜರಾತ್ ತಂಡದ ಸಹ ಆಟಗಾರರು ಅವರನ್ನು ಸಂತೈಸಿದರು. ಈ ಆವೃತ್ತಿಯಲ್ಲಿ ಮೂರನೇ ಪಂದ್ಯವಾಡಿದ ಗುಜರಾತ್‌ಗೆ ಇದು ಮೊದಲ ಸೋಲು. ಕೆಕೆಆರ್‌ಗೆ ಎರಡನೇ ಗೆಲುವು. ಈಚೆಗೆ ತನ್ನ ಎರಡನೇ ಪಂದ್ಯದಲ್ಲಿ ಕೋಲ್ಕತ್ತ ತಂಡವು ಆರ್‌ಸಿಬಿ ಎದುರು ಜಯಿಸಿತ್ತು. ಮೊದಲೆರಡು ಪಂದ್ಯಗಳನ್ನು ಜಯಿಸಿ ಆತ್ಮವಿಶ್ವಾಸದಲ್ಲಿದ್ದ ಗುಜರಾತ್ ಬಳಗವು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿತು. ಸಾಯಿ ಸುದರ್ಶನ್ (53; 38ಎ, 4X3) ಹಾಗೂ ವಿಜಯ್ ಶಂಕರ್ (ಔಟಾಗದೆ 63: 24ಎ, 4X4, 6X5) ಅವರ ಅರ್ಧಶತಕಗಳ ಬಲದಿಂದ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 204 ರನ್‌ ಗಳಿಸಿತು. ಕೆಕೆಆರ್ ತಂಡದ ಸುನೀಲ್ ನಾರಾಯಣ್ ಮೂರು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಹಾರ್ದಿಕ್ ಪಾಂಡ್ಯ ಗೈರು ಹಾಜರಿಯಲ್ಲಿ ತಂಡವನ್ನು ಮುನ್ನಡೆಸಿದ ರಶೀದ್ ಖಾನ್ ಬೌಲಿಂಗ್‌ನಲ್ಲಿ ಯಶಸ್ವಿಯಾದರು. ಆದರೆ ಬೌಲರ್‌ಗಳ ನಿಯೋಜನೆಯಲ್ಲಿ ಎಡವಿದರು. ಗುರಿ ಬೆನ್ನಟ್ಟಿದ್ದ ಕೋಲ್ಕತ್ತ ತಂಡಕ್ಕೆ ಆರಂಭದಲ್ಲಿಯೇ ಮೊಹಮ್ಮದ್ ಶಮಿ ಮತ್ತು ಜೋಶುವ ಲಿಟಲ್ ಪೆಟ್ಟುಕೊಟ್ಟಿದ್ದರು. ಆದರೆ, ವೆಂಕಟೇಶ್ ಅಯ್ಯರ್ (83; 40ಎ) ಹಾಗೂ ನಿತೀಶ್ ರಾಣಾ (45; 29ಎ) ಅವರು ತಂಡದ ಹೋರಾಟವನ್ನು ಜೀವಂತವಾಗಿಟ್ಟರು. ಆದರೆ ಅವರಿಬ್ಬರೂ ಔಟಾದ ನಂತರ ಇನಿಂಗ್ಸ್ ಹೊಣೆ ರಿಂಕು ಸಿಂಗ್ ಮೇಲೆ ಬಿತ್ತು. ರಸೆಲ್, ಸುನೀಲ್, ಶಾರ್ದೂಲ್ ಅವರು ಹೀಗೆ ಬಂದು ಹಾಗೆ ಹೋದರು. ಈ ನಡುವೆಯೂ ಆಬ್ಬರಿಸಿದ ಉತ್ತರಪ್ರದೇಶದ ಹುಡುಗ ರಿಂಕು ತಂಡವನ್ನು ಗೆಲ್ಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.