2023: ಹ್ಯಾಟ್ರಿಕ್ ಜಯದ ಮೇಲೆ ಗುಜರಾತ್ ಕಣ್ಣು ಅಹಮದಾಬಾದ್ (ಪಿಟಿಐ): ಸತತ ಎರಡು ಪಂದ್ಯಗಳನ್ನು ಗೆದ್ದಿರುವ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡವು ‘ಹ್ಯಾಟ್ರಿಕ್ ವಿಜಯ’ದ ಮೇಲೆ ಕಣ್ಣಿಟ್ಟಿದೆ. ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಗುಜರಾತ್ ತಂಡವು ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಸೆಣಸಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿದ ಹುರುಪಿನಲ್ಲಿರುವ ಕೋಲ್ಕತ್ತ ತಂಡವು ಮತ್ತೊಂದು ಜಯದ ಕನಸಿನೊಂದಿಗೆ ಇಲ್ಲಿಗೆ ಬಂದಿದೆ. ಆದರೆ ಗುಜರಾತ್ ತಂಡವು ಜಯದ ಹಿಡಿತವನ್ನು ಸುಲಭವಾಗಿ ಬಿಟ್ಟುಕೊಡದು. ಆಲ್‌ರೌಂಡರ್ ನಾಯಕ ಹಾರ್ದಿಕ್ ಅವರೊಂದಿಗೆ ಯುವ ಆಟಗಾರ ಸಾಯಿ ಸುದರ್ಶನ್, ಶುಭಮನ್ ಗಿಲ್ ಮತ್ತು ಡೇವಿಡ್ ಮಿಲ್ಲರ್ ತಂಡದ ಬ್ಯಾಟಿಂಗ್ ವಿಭಾಗದ ಪ್ರಮುಖರಾಗಿದ್ದಾರೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ದೆಹಲಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯಿಸಿತ್ತು. ಇದರಿಂದಾಗಿ ತಂಡವು ಅಪಾರ ಆತ್ಮವಿಶ್ವಾಸದಲ್ಲಿದೆ. ಕೋಲ್ಕತ್ತ ತಂಡವು ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋತಿತ್ತು. ಎರಡನೇಯದ್ದರಲ್ಲಿ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ ಆರ್‌ಸಿಬಿ ಎದುರಿನ ಪಂದ್ಯ ಗೆದ್ದಿತ್ತು. ನವಪ್ರತಿಭೆ ಸುಯಶ್ ಶರ್ಮಾ ಹಾಗೂ ವರುಣ್ ಚಕ್ರವರ್ತಿಯವರ ಅಮೋಘ ಬೌಲಿಂಗ್‌ ಕೂಡ ಗಮನ ಸೆಳೆದಿತ್ತು. ಆದರೆ ಗುಜರಾತ್ ತಂಡದ ಯೋಜನಾಬದ್ಧ ಆಟಕ್ಕೆ ಕಡಿವಾಣ ಹಾಕಲು ಕೋಲ್ಕತ್ತ ಬಳಗವು ವಿಭಿನ್ನ ಯೋಜನೆಯೊಂದಿಗೆ ಕಣಕ್ಕಿಳಿಯುವ ಅನಿವಾರ್ಯತೆ ಇದೆ. ಅದರಲ್ಲೂ ಉತ್ತಮ ಫಾರ್ಮ್‌ನಲ್ಲಿರುವ ಶುಭಮನ್ ಗಿಲ್ ಅವರನ್ನು ಕಟ್ಟಿಹಾಕುವುದು ಅನುಭವಿ ವೇಗಿ ಮೊಹಮ್ಮದ್ ಶಮಿ ಹಾಗೂ ಅಲ್ಜರಿ ಜೋಸೆಫ್ ಅವರ ಮುಂದಿರುವ ಪ್ರಮುಖ ಸವಾಲು. ತಂಡಗಳು: ಗುಜರಾತ್ ಟೈಟನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ಶ್ರೀಕರ್ ಭರತ್, ಅಲ್ಜರಿ ಜೋಸೆಫ್, ಜೋಶ್ ಲಿಟ್ಲ್, ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ಮೊಹಮ್ಮದ್ ಶಮಿ, ದರ್ಶನ್ ನಾಯ್ಕಂಡೆ, ನೂರ್ ಅಹಮದ್, ಉರ್ವಿಲ್ ಪಟೇಲ್, ರಶೀದ್ ಖಾನ್, ವೃದ್ಧಿಮಾನ್ ಸಹಾ, ಆರ್. ಸಾಯಿಕಿಶೋರ್, ಸಾಯಿ ಸುದರ್ಶನ್, ಪ್ರದೀಪ್ ಸಂಗ್ವಾನ್, ದಸುನ್ ಶನಕಾ, ವಿಜಯಶಂಕರ್, ಮೋಹಿತ್ ಶರ್ಮಾ, ಶಿವಂ ಮಾವಿ, ಶುಭಮನ್ ಗಿಲ್, ಒಡಿನ್ ಸ್ಮಿತ್, ರಾಹುಲ್ ತೆವಾಟಿಯಾ, ಮ್ಯಾಥ್ಯೂ ವೇಡ್, ಜಯಂತ್ ಯಾದವ್, ಯಶ್ ದಯಾಳ್. ಕೋಲ್ಕತ್ತ ನೈಟ್ ರೈಡರ್ಸ್: ನಿತೀಶ್ ರಾಣಾ (ನಾಯಕ), ವೈಭವ್ ಅರೋರಾ, ಲಾಕಿ ಫರ್ಗ್ಯುಸನ್, ಹರ್ಷಿತ್ ರಾಣಾ, ವೆಂಕಟೇಶ್ ಅಯ್ಯರ್, ನಾರಾಯಣ ಜಗದೀಶನ್, ಕುಲವಂತ್ ಖೆಜ್ರೊಲಿಯಾ, ಲಿಟನ್ ದಾಸ್, ಮನದೀಪ್ ಸಿಂಗ್, ಸುನೀಲ್ ನಾರಾಯಣ್, ರೆಹಮಾನುಲ್ಲಾ ಗುರ್ಬಾಜ್, ಜೇಸನ್ ರಾಯ್, ಅನುಕೂಲ್ ರಾಯ್, ಆ್ಯಂಡ್ರೆ ರಸೆಲ್, ರಿಂಕು ಸಿಂಗ್, ಟಿಮ್ ಸೌಥಿ, ಸುಯಶ್ ಶರ್ಮಾ, ಶಾರ್ದೂಲ್ ಠಾಕೂರ್, ವರುಣ ಚಕ್ರವರ್ತಿ, ಡೇವಿಡ್ ವೀಸ್, ಉಮೇಶ್ ಯಾದವ್. ಪಂದ್ಯ ಆರಂಭ: ಮಧ್ಯಾಹ್ನ 3.30 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ಮತ್ತು ಜಿಯೊ ಸಿನೆಮಾ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.