: ಜಡೇಜ, ಸ್ಯಾಂಟನರ್ ಸ್ಪಿನ್ ಮೋಡಿ: ಚೆನ್ನೈಗೆ 158 ರನ್ ಗುರಿ ನೀಡಿದ ಮುಂಬೈ ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ರವೀಂದ್ರ ಜಡೇಜ ಹಾಗೂ ಮಿಚೆಲ್ ಸ್ಯಾಂಟನರ್ ಅವರ ಸ್ಪಿನ್ ಮೋಡಿಯ ಮುಂದೆ ಮುಂಬೈ ತಂಡವು ಸಾಧಾರಣ ಮೊತ್ತ ಗಳಿಸಿತು. ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಚೆನ್ನೈ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮುಂಬೈ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 157 ರನ್ ಗಳಿಸಿತು. ಮುಂಬೈ ತಂಡಕ್ಕೆ ರೋಹಿತ್ ಶರ್ಮಾ (21 ರನ್) ಹಾಗೂ ಇಶಾನ್ ಕಿಶನ್ (32 ರನ್) ಉತ್ತಮ ಆರಂಭ ನೀಡಿದರು. ಮಧ್ಯಮಕ್ರಮಾಂಕದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ನಾಲ್ಕನೇ ಓವರ್‌ನಲ್ಲಿ ತುಷಾರ್ ದೇಶಪಾಂಡೆ ಹಾಕಿದ ಎಸೆತದಲ್ಲಿ ರೋಹಿತ್ ಶರ್ಮಾ ಕ್ಲೀನ್‌ಬೌಲ್ಡ್ ಆದರು. ಐದು ಬೌಂಡರಿ ಹೊಡೆದಿದ್ದ ಇಶಾನ್ ಕಿಶನ್ ಅವರಿಗೆ ಏಳನೇ ಓವರ್‌ನಲ್ಲಿ ರವೀಂದ್ರ ಜಡೇಜ ಡಗ್‌ಔಟ್ ದಾರಿ ತೋರಿಸಿದರು. ಕ್ಯಾಮರಾನ್ ಗ್ರೀನ್ ಹಾಗೂ ಹೋದ ಪಂದ್ಯದಲ್ಲಿ ಮಿಂಚಿದ್ದ ತಿಲಕ್ ವರ್ಮಾ (22 ರನ್) ಅವರ ವಿಕೆಟ್ ಕೂಡ ಜಡೇಜ ಪಾಲಾಯಿತು. ಇನ್ನೊಂದೆಡೆಯಿಂದ ಉತ್ತಮ ಬೌಲಿಂಗ್ ಮಾಡುತ್ತಿದ್ದ ಮಿಚೆಲ್ ಸ್ಯಾಂಟನರ್ ಲೆಗ್‌ಸ್ಟಂಪ್ ಹೊರಗೆ ವೈಡ್‌ ಆ್ಯಂಗಲ್‌ನಲ್ಲಿ ಹೋಗುತ್ತಿದ್ದ ಚೆಂಡನ್ನು ಸ್ವೀಪ್ ಮಾಡಲು ಯತ್ನಿಸಿದ ಸೂರ್ಯಕುಮಾರ್ ಯಾದವ್ ದಂಡ ತೆತ್ತರು. ಅಂಪೈರ್ ವೈಡ್ ಸಿಗ್ನಲ್ ಕೊಟ್ಟಿದ್ದರು. ಆದರೆ ವಿಕೆಟ್‌ಕೀಪರ್ ಧೋನಿ ಚುರುಕಾಗಿ ಯುಡಿಆರ್‌ಎಸ್ (ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ) ತೆಗೆದುಕೊಂಡರು. ಚೆಂಡು ಬ್ಯಾಟ್‌ ಅಂಚಿಗೆ ಸವರಿ ಧೋನಿ ಕೈಸೇರಿದ್ದು ವಿಡಿಯೊ ತುಣುಕಿನಲ್ಲಿ ಸ್ಪಷ್ಟವಾಗಿತ್ತು. ಸೂರ್ಯಕುಮಾರ್ ವೈಫಲ್ಯ ಮುಂದುವರಿಯಿತು. ಟಿಮ್ ಡೇವಿಡ್ (31 ರನ್) ಹಾಗೂ ಕೊನೆಯಲ್ಲಿ ಮಿಂಚಿದ ಹೃತಿಕ್ ಶೋಕೀನ್ (ಔಟಾಗದೆ 18) ಅವರಿಂದಾಗಿ ತಂಡವು 150 ರನ್ ಗಡಿ ದಾಟಿತು. ಚೆನ್ನೈನ ತುಷಾರ್ ದೇಶಪಾಂಡೆ ಎರಡು ಹಾಗೂ ಮಗಾಲ ಒಂದು ವಿಕೆಟ್ ಗಳಿಸಿದರು. ಸಂಕ್ಷಿಪ್ತ ಸ್ಕೋರು: ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 157 (ರೋಹಿತ್ ಶರ್ಮಾ 21, ಇಶಾನ್ ಕಿಶನ್ 32, ತಿಲಕ್ ವರ್ಮಾ 22, ಟಿಮ್ ಡೇವಿಡ್ 31, ತುಷಾರ್ ದೇಶಪಾಂಡೆ 31ಕ್ಕೆ2, ಮಿಚೆಲ್ ಸ್ಯಾಂಟನರ್ 28ಕ್ಕೆ2, ರವೀಂದ್ರ ಜಡೇಜ 20ಕ್ಕೆ3) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.