ಜಡೇಜ ಸ್ಪಿನ್‌ ಮೋಡಿ; ಮುಂಬೈಗೆ ಸೋಲುಣಿಸಿದ ಚೆನ್ನೈ ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ಮತ್ತು ಹಾಲಿ ನಾಯಕರ ನಡುವಣ ಹಣಾಹಣಿಯಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರ ಕೈಮೇಲಾಯಿತು. ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಏಳು ವಿಕೆಟ್‌ಗಳಿಂದ ರೋಹಿತ್‌ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್‌ ತಂಡವನ್ನು ಮಣಿಸಿತು. ರವೀಂದ್ರ ಜಡೇಜ ಹಾಗೂ ಮಿಚೆಲ್ ಸ್ಯಾಂಟನರ್ ಅವರ ಸ್ಪಿನ್ ಮೋಡಿ ಮತ್ತು ಅಜಿಂಕ್ಯ ರಹಾನೆ (61 ರನ್‌, 27ಎ., 4X7, 6X3) ಅಬ್ಬರದ ಆಟ ಚೆನ್ನೈ ತಂಡದ ಗೆಲುವಿಗೆ ಕಾರಣವಾಯಿತು. ಮೊದಲು ಬ್ಯಾಟ್‌ ಮಾಡಿದ ಮುಂಬೈ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 157 ರನ್ ಗಳಿಸಿದರೆ, ಧೋನಿ ಬಳಗ 18.1 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಗೆಲುವಿನ ಗುರಿ ತಲುಪಿತು. ಚೆನ್ನೈ ತಂಡ ಡೆವೊನ್‌ ಕಾನ್ವೆ (0) ಅವರನ್ನು ಮೊದಲ ಓವರ್‌ನಲ್ಲೇ ಕಳೆದುಕೊಂಡಿತು. ಆದರೆ ಅತ್ಯುತ್ತಮ ಫಾರ್ಮ್‌ನಲ್ಲಿರುವ ಋತುರಾಜ್‌ ಗಾಯಕವಾಡ್‌ (ಔಟಾಗದೆ 40, 36 ಎ.) ಮತ್ತು ರಹಾನೆ 2ನೇ ವಿಕೆಟ್‌ಗೆ 7.2 ಓವರ್‌ಗಳಲ್ಲಿ 82 ರನ್‌ ಸೇರಿಸಿದರು. ರಹಾನೆ ಅಬ್ಬರದ ಆಟವಾಡಿ ಎದುರಾಳಿ ಬೌಲರ್‌ಗಳ ಯೋಜನೆಗಳನ್ನು ತಲೆಕೆಳಗಾಗಿಸಿದರು. 19 ಎಸೆತಗಳಲ್ಲಿ 50ರ ಗಡಿ ದಾಟಿದ ಅವರು ಈ ಬಾರಿಯ ಟೂರ್ನಿಯಲ್ಲಿ ಅತಿವೇಗದ ಅರ್ಧಶತಕದ ಸಾಧನೆ ಮಾಡಿದರು. ಕಳೆದ ಎರಡು ಪಂದ್ಯಗಳಲ್ಲಿ ಅಬ್ಬರಿಸಿದ್ದ ಋತುರಾಜ್‌ ತಾಳ್ಮೆಯ ಆಟವಾಡಿದರು. ಸ್ಪಿನ್‌ ಮೋಡಿ: ಇದಕ್ಕೂ ಮುನ್ನ ಮುಂಬೈ ತಂಡವನ್ನು ಜಡೇಜ (20ಕ್ಕೆ 3) ಮತ್ತು ಸ್ಯಾಂಟನರ್‌ ಅವರು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದರು. ರೋಹಿತ್ (21 ರನ್) ಹಾಗೂ ಇಶಾನ್ ಕಿಶನ್ (32 ರನ್) ಅವರು ಮುಂಬೈಗೆ ಉತ್ತಮ ಆರಂಭ ನೀಡಿದರೂ, ಮಧ್ಯಮಕ್ರಮಾಂಕದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ನಾಲ್ಕನೇ ಓವರ್‌ನಲ್ಲಿ ತುಷಾರ್ ದೇಶಪಾಂಡೆ ಹಾಕಿದ ಎಸೆತದಲ್ಲಿ ರೋಹಿತ್ ಶರ್ಮಾ ಕ್ಲೀನ್‌ಬೌಲ್ಡ್ ಆದರು. ಐದು ಬೌಂಡರಿ ಹೊಡೆದಿದ್ದ ಇಶಾನ್ ಕಿಶನ್ ಅವರಿಗೆ ಏಳನೇ ಓವರ್‌ನಲ್ಲಿ ರವೀಂದ್ರ ಜಡೇಜ ಡಗ್‌ಔಟ್ ದಾರಿ ತೋರಿಸಿದರು. ಕ್ಯಾಮರಾನ್ ಗ್ರೀನ್ ಹಾಗೂ ಹೋದ ಪಂದ್ಯದಲ್ಲಿ ಮಿಂಚಿದ್ದ ತಿಲಕ್ ವರ್ಮಾ (22 ರನ್) ಅವರ ವಿಕೆಟ್ ಕೂಡ ಜಡೇಜ ಪಾಲಾಯಿತು. ಸೂರ್ಯಕುಮಾರ್ ವೈಫಲ್ಯ ಮುಂದುವರಿಯಿತು. ಸಂಕ್ಷಿಪ್ತ ಸ್ಕೋರು: ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 157 (ರೋಹಿತ್ ಶರ್ಮಾ 21, ಇಶಾನ್ ಕಿಶನ್ 32, ತಿಲಕ್ ವರ್ಮಾ 22, ಟಿಮ್ ಡೇವಿಡ್ 31, ತುಷಾರ್ ದೇಶಪಾಂಡೆ 31ಕ್ಕೆ2, ಮಿಚೆಲ್ ಸ್ಯಾಂಟನರ್ 28ಕ್ಕೆ2, ರವೀಂದ್ರ ಜಡೇಜ 20ಕ್ಕೆ3) ಚೆನ್ನೈ ಸೂಪರ್‌ ಕಿಂಗ್ಸ್‌ 18.1 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 159 (ಅಜಿಂಕ್ಯ ರಹಾನೆ 61, ಶಿವಂ ದುಬೆ 28, ಋತುರಾಜ್‌ ಗಾಯಕವಾಡ್ ಔಟಾಗದೆ 40, ಅಂಬಟಿ ರಾಯುಡು ಔಟಾಗದೆ 20, ಕುಮಾರ್‌ ಕಾರ್ತಿಕೇಯ 24ಕ್ಕೆ 1) ಫಲಿತಾಂಶ: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ 7 ವಿಕೆಟ್‌ ಗೆಲುವು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.