2023 | ರೋಚಕ ಚಾಲೆಂಜ್ ಗೆದ್ದ ಲಖನೌ: RCBಗೆ ನಿರಾಸೆ ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ಕ್ರಿಕೆಟ್‌ಪ್ರಿಯರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಐಪಿಎಲ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್‌ 1 ವಿಕೆಟ್‌ನಿಂದ ರೋಚಕ ಜಯ ಸಾಧಿಸಿತು. ಕೊನೆಯ ಎಸೆತದಲ್ಲಿ ಲಭಿಸಿದ ‘ಬೈ’ ರನ್‌ ನಲ್ಲಿ ಫಲಿತಾಂಶ ನಿರ್ಧಾರವಾದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸೋತಿತು. ಕೆಲವು ನಾಟಕೀಯ ತಿರುವುಗಳನ್ನು ಕಂಡ ಪಂದ್ಯದಲ್ಲಿ ಲಖನೌ ತಂಡಕ್ಕೆ ಜಯ ಸುಲಭವಾಗಿ ಒಲಿಯಲಿಲ್ಲ. 213 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಲಖನೌ ತಂಡವು ನಿಕೊಲಸ್ ಪೂರನ್ (62; 19ಎ) ಮತ್ತು ಮಾರ್ಕಸ್ ಸ್ಟೊಯಿನಿಸ್ (65; 30ಎ) ಅವರು ತಮ್ಮ ಅಬ್ಬರದ ಅರ್ಧಶತಕಗಳಿಂದ ಬಲ ತುಂಬಿದ್ದರು. ಇದರಿಂದಾಗಿ ಲಖನೌ ತಂಡವು 18.3 ಓವರ್‌ಗಳಲ್ಲಿ 206 ರನ್ ಗಳಿಸಿತ್ತು. ಈ ಓವರ್‌ನಲ್ಲಿಯೇ ಜಯಿಸುವ ಅವಕಾಶ ತಂಡಕ್ಕೆ ಇತ್ತು. ಈ ಸಂದರ್ಭದಲ್ಲಿ ಲಖನೌ ತಂಡದ ಇಂಪ್ಯಾಕ್ಟ್‌ ಪ್ಲೇಯರ್ ಆಯುಷ್‌ ಬಡೋನಿ ಸ್ವೀಪ್‌ ಮೂಲಕ ಚೆಂಡು ಸಿಕ್ಸರ್‌ಗೆತ್ತಿದ್ದರು. ಆದರೆ ಹಿಟ್‌ವಿಕೆಟ್ ಆದರು. ಇದರಿಂದ ಸಿಕ್ಸರ್‌ ಮಾನ್ಯವಾಗಲಿಲ್ಲ. ಇದು ಆರ್‌ಸಿಬಿ ಬಳಗದಲ್ಲಿ ಮತ್ತೆ ಗೆಲುವಿನ ಆಸೆ ಚಿಗುರಿಸಿತು. ಕೊನೆಯ ಓವರ್‌ನಲ್ಲಿ ಹರ್ಷಲ್ ಪಟೇಲ್ ಅವರು ಮಾರ್ಕ್ ವುಡ್ ಮತ್ತು ಜೈದೇವ್ ಉನದ್ಕತ್ ವಿಕೆಟ್‌ಗಳನ್ನು ಕಬಳಿಸಿದರು. ಆದರೆ ತಂಡ ಅಷ್ಟರಲ್ಲಿ ಸಮಬಲ ಸಾಧಿಸಿತ್ತು. ಲಖನೌ ಗೆಲುವಿಗೆ ಕೊನೆಯ ಎಸೆತದಲ್ಲಿ ಒಂದು ರನ್ ಬೇಕಿತ್ತು. ಆದರೆ ಪಟೇಲ್ ಹಾಕಿದ ಎಸೆತವನ್ನು ಹೊಡೆಯುವ ಯತ್ನದಲ್ಲಿ ಬ್ಯಾಟರ್‌ ಆವೇಶ್ ಖಾನ್‌ ಬೀಟ್ ಆದರು. ಅವರು ಒಂದು ರನ್‌ಗಾಗಿ ಓಡಿದರು. ಇತ್ತ ನಾನ್‌ಸ್ಟ್ರೈಕರ್ ನಲ್ಲಿದ್ದ ರವಿ ಬಿಷ್ಣೋಯಿ ಕೂಡ ವೇಗವಾಗಿ ಓಡಿದರು. ಈ ವೇಳೆ ಚೆಂಡನ್ನು ಹಿಡಿತಕ್ಕೆ ಪಡೆದು ಸ್ಟಂಪ್‌ಗೆ ಥ್ರೋ ಮಾಡುವಲ್ಲಿ ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್ ತಡಬಡಾಯಿಸಿದರು. ಬೆಂಗಳೂರು ಗೆಲುವು ಕೈತಪ್ಪಿತು. ಹೋರಾಟ ವ್ಯರ್ಥ: ವಿರಾಟ್ ಕೊಹ್ಲಿ (61 ರನ್), ಫಫ್ ಡುಪ್ಲೆಸಿ(79 ರನ್) ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ (59 ರನ್) ಅವರ ಅಮೋಘ ಅರ್ಧಶತಕಗಳ ಬಲದಿಂದ ಆರ್‌ಸಿಬಿಯು 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 212 ರನ್‌ ಗಳಿಸಿತ್ತು. ಆದರೆ ಈ ತ್ರಿಮೂರ್ತಿಗಳ ಆಟ ವ್ಯರ್ಥವಾಯಿತು. ವಿರಾಟ್, ಫಫ್ ಹಾಗೂ ಗ್ಲೆನ್ ಅವರು ಸೇರಿ 15 ಸಿಕ್ಸರ್ ಮತ್ತು 12 ಬೌಂಡರಿಗಳನ್ನು ಸಿಡಿಸಿದರು. ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದರು. ಮೊದಲ ವಿಕೆಟ್‌ಗೆ ಕೊಹ್ಲಿ ಮತ್ತು ಡುಪ್ಲೆಸಿ 96 ರನ್‌ ಸೇರಿಸಿದರು. ಗ್ಲೆನ್ ಮತ್ತು ಡುಪ್ಲೆಸಿ ಎರಡನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 50 ಎಸೆತಗಳಲ್ಲಿ 115 ರನ್‌ ಸೇರಿಸಿದರು. ಗುರಿ ಬೆನ್ನಟ್ಟಿದ ಲಖನೌ ತಂಡಕ್ಕೆ ಗೆಲುವಿನ ಬಲ ತುಂಬಿದ್ದು ಮಾರ್ಕಸ್ ಸ್ಟೊಯಿನಿಸ್ ಮತ್ತು ನಿಕೊಲಸ್ ಪೂರನ್ ಅವರ ಶರವೇಗದ ಅರ್ಧಶತಕಗಳು. ಲಖನೌ ತಂಡವು 24 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡ ಸಂದರ್ಭದಲ್ಲಿ ಮಾರ್ಕಸ್‌ ಅವರ ಕ್ಯಾಚ್ ಕೈಚೆಲ್ಲಿದ್ದು ಆರ್‌ಸಿಬಿಗೆ ದುಬಾರಿಯಾಯಿತು. ಅವರು 30 ಎಸೆತಗಳಲ್ಲಿ 65 ರನ್‌ಗಳನ್ನು ಗಳಿಸಿದರು. ಆರ್‌ಸಿಬಿ ಇಂಪ್ಯಾಕ್ಟ್ ಪ್ಲೆಯರ್ ಕರ್ಣ್ ಶರ್ಮಾ ಅವರ ಬೌಲಿಂಗ್‌ನಲ್ಲಿ ಸ್ಟೊಯಿನಿಸ್ ಔಟಾದರು. ಆದರೆ ಕ್ರೀಸ್‌ಗೆ ಬಂದ ಪೂರನ್ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಅವರು 17ನೇ ಓವರ್‌ನಲ್ಲಿ ಸಿರಾಜ್ ಎಸೆತದಲ್ಲಿ ಔಟಾಗದೇ ಹೋಗಿದ್ದರೆ ತಂಡವನ್ನು ಜಯದ ದಡ ಮುಟ್ಟಿಸುವ ಸಾಧ್ಯತೆ ಇತ್ತು. ಬ್ಯಾಟರ್‌ಗಳ ಭರಾಟೆಯ ನಡುವೆಯೂ ಲಖನೌ ತಂಡದ ವೇಗಿ ಮಾರ್ಕ್‌ ವುಡ್ ಒಂದು ಮೇಡನ್ ಓವರ್ ಮಾಡುವಲ್ಲಿ ಯಶಸ್ವಿಯಾದರು. ಈ ಪಂದ್ಯದಲ್ಲಿ ಒಟ್ಟು 425 ರನ್‌ಗಳು ದಾಖಲಾದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.