ಡೆಲ್ಲಿ– ಮುಂಬೈ ಇಂಡಿಯನ್ಸ್ ಹಣಾಹಣಿ: ಮೊದಲ ಗೆಲುವಿನ ನಿರೀಕ್ಷೆ ನವದೆಹಲಿ: ಮುಂಬೈ ಇಂಡಿಯನ್ಸ್‌ ಮತ್ತು ಡೆ‌ಲ್ಲಿ ಕ್ಯಾಪಿಟಲ್ಸ್‌ ತಂಡಗಳು ಐಪಿಎಲ್‌ ಟೂರ್ನಿಯಲ್ಲಿ ಮೊದಲ ಗೆಲುವಿನ ನಿರೀಕ್ಷೆಯೊಂದಿಗೆ ಮಂಗಳವಾರ ಇಲ್ಲಿ ಎದುರಾಗಲಿವೆ. ಡೆಲ್ಲಿ ತಂಡಕ್ಕೆ ಆಡಿರುವ ಮೂರೂ ಪಂದ್ಯಗಳಲ್ಲಿ ಸೋಲು ಎದುರಾಗಿದ್ದರೆ, ಮುಂಬೈ ಇಂಡಿಯನ್ಸ್‌ ಎರಡು ಪಂದ್ಯಗಳಲ್ಲಿ ಮುಗ್ಗರಿಸಿದೆ. ಭಾರತೀಯ ಆಟಗಾರರು ಫಾರ್ಮ್‌ ಕಂಡುಕೊಳ್ಳಲು ವಿಫಲವಾಗಿರುವುದು ಎರಡೂ ತಂಡಗಳ ಹಿನ್ನಡೆಗೆ ಪ್ರಮುಖ ಕಾರಣ. ಗೆಲುವಿನ ಹಾದಿಗೆ ಮರಳಬೇಕಾದರೆ ಕಾರ್ಯತಂತ್ರವನ್ನು ಮರುರೂಪಿಸುವ ಸವಾಲು ಉಭಯ ತಂಡಗಳ ಮುಂದಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ತಂಡದ ಅಗ್ರ ಕ್ರಮಾಂಕವು ಟ್ರೆಂಟ್‌ ಬೌಲ್ಟ್‌ ಅವರ ಮೊನಚಾದ ಬೌಲಿಂಗ್‌ ಮುಂದೆ ನಲುಗಿತ್ತು. ವೇಗದ ಬೌಲಿಂಗ್‌ ದಾಳಿ ಎದುರಿಸುವಲ್ಲಿ ಪೃಥ್ವಿ ಶಾ ಅವರ ದೌರ್ಬಲ್ಯ ಮತ್ತೆ ಬಯಲಾಗಿದೆ. ಕಳೆದ ಮೂರು ಇನಿಂಗ್ಸ್‌ಗಳಲ್ಲಿ ಅವರು ವೇಗ, ಬೌನ್ಸ್‌ ಮತ್ತು ಸ್ವಿಂಗ್‌ ದಾಳಿಯನ್ನು ಎದುರಿಸುವಲ್ಲಿ ಎಡವಿದ್ದರು. ನಾಯಕ ಡೇವಿಡ್‌ ವಾರ್ನರ್‌ ಮೂರು ಪಂದ್ಯಗಳಿಂದ 158 ರನ್ ಕಲೆಹಾಕಿದ್ದರೂ, ಅಬ್ಬರದ ಬ್ಯಾಟಿಂಗ್‌ ಮಾಡಿಲ್ಲ. ಅವರು 117 ಸ್ಟ್ರೈಕ್‌ರೇಟ್‌ ಹೊಂದಿದ್ಧಾರೆ. ಮಿಚೆಲ್‌ ಮಾರ್ಷ್‌ ಬದಲು ಕಳೆದ ಪಂದ್ಯದಲ್ಲಿ ಅವಕಾಶ ಪಡೆದಿದ್ದ ಮನೀಷ್‌ ಪಾಂಡೆ ಮೊದಲ ಎಸೆತದಲ್ಲೇ ಔಟಾಗಿದ್ದರು. ಮತ್ತೊಂದೆಡೆ ರೋಹಿತ್‌ ಶರ್ಮಾ ಬಳಗ ಗೆಲುವು ಪಡೆಯಲೇಬೇಕಾದ ಒತ್ತಡದಲ್ಲಿದೆ. ಅಗ್ರಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯ ಈ ತಂಡವನ್ನೂ ಕಾಡುತ್ತಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ರೋಹಿತ್‌ ಉತ್ತಮ ಆರಂಭ ಪಡೆದಿದ್ದರೂ, ತುಷಾರ್‌ ದೇಶಪಾಂಡೆ ಅವರ ಸೊಗಸಾದ ಎಸೆತದಲ್ಲಿ ಔಟ್‌ ಆಗಿದ್ದರು. ಯುವ ಆಟಗಾರ ಇಶಾನ್‌ ಕಿಶನ್‌ ಅವರಿಂದ ತಂಡ ಬಿರುಸಿನ ಆಟ ನಿರೀಕ್ಷಿಸುತ್ತಿದೆ. ಹರಾಜಿನಲ್ಲಿ ₹ 17.50 ಕೋಟಿ ಪಡೆದಿದ್ದ ಕ್ಯಾಮರಾನ್ ಗ್ರೀನ್‌ ಇನ್ನೂ ಲಯ ಕಂಡುಕೊಂಡಿಲ್ಲ. ಸೂರ್ಯಕುಮಾರ್‌ ಯಾದವ್‌ ಈ ಪಂದ್ಯದಲ್ಲಾದರೂ ರನ್‌ ಬರ ನೀಗಿಸುವರೇ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ತಿಲಕ್‌ ವರ್ಮಾ ಹೊರತುಪಡಿಸಿದರೆ ತಂಡದ ಇತರ ಬ್ಯಾಟರ್‌ಗಳು ಗಮನ ಸೆಳೆದಿಲ್ಲ. ಪಂದ್ಯ ಆರಂಭ: ರಾತ್ರಿ 7.30 ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿ, ಜಿಯೊ ಸಿನೆಮಾ ಆ್ಯಪ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.