2023 | ಪಂಜಾಬ್‌ ವಿರುದ್ಧ ಹೈದರಾಬಾದ್‌ಗೆ ಭರ್ಜರಿ ಜಯ ಹೈದರಾಬಾದ್: ರಾಹುಲ್‌ ತ್ರಿಪಾಠಿ ಅವರ ಅಜೇಯ ಅರ್ಧಶತಕ ಹಾಗೂ ಮಯಂಕ್ ಮಾರ್ಕಂಡೆ (15ಕ್ಕೆ 4) ಅವರ ಸ್ಪಿನ್ ಮೋಡಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಗೆಲುವು ತಂದುಕೊಟ್ಟವು. ರಾಜೀವಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂಜಾಬ್‌ ಎದುರಿನ ಐಪಿಎಲ್‌ ಪಂದ್ಯದಲ್ಲಿ ಹೈದರಾಬಾದ್‌ ಎಂಟು ವಿಕೆಟ್‌ಗಳಿಂದ ಗೆದ್ದಿತು. ಪಂಜಾಬ್ ನಾಯಕ ಶಿಖರ್ ಧವನ್ (ಅಜೇಯ 99) ಆಟ ವ್ಯರ್ಥವಾಯಿತು. ಮೊದಲು ಬ್ಯಾಟ್ ಮಾಡಿದ ಪಂಜಾಬ್‌ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 143 ರನ್ ಗಳಿಸಿತು. ಏಡನ್ ಮರ್ಕರಂ ನಾಯಕತ್ವದ ತಂಡವು 17.1 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು ಗೆಲುವಿನ ಗುರಿ ತಲುಪಿತು. ಹೈದರಾಬಾದ್ ಪರ ಆರಂಭಿಕರಾಗಿ ಕಣಕ್ಕಿಳಿದ ಹ್ಯಾರಿ ಬ್ರೂಕ್‌ (13) ಮತ್ತು ಮಯಂಕ್ ಅಗರವಾಲ್‌ (21) ಮೊದಲ ವಿಕೆಟ್‌ಗೆ 27 ರನ್‌ ಸೇರಿಸಿದರು. ಆದರೆ ವೈಯಕ್ತಿಕ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು. ಮುರಿಯದ ಮೂರನೇ ವಿಕೆಟ್‌ ಜೊತೆಯಾಟದಲ್ಲಿ ರಾಹುಲ್ ತ್ರಿಪಾಠಿ (ಔಟಾಗದೆ 74, 48ಎ, 4X10, 6X3) ಮತ್ತು ಮರ್ಕರಂ (37, 21ಎ, 4X6) ಬರೋಬ್ಬರಿ 100 ರನ್‌ ಕಲೆಹಾಕಿ ತಂಡದ ಸುಲಭ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಶಿಖರ್ ಆಟ ವ್ಯರ್ಥ: ಟಾಸ್ ಗೆದ್ದ ಸನ್‌ರೈಸರ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಪಂಜಾಬ್ ಕಿಂಗ್ಸ್ ತಂಡವು ಗೌರವಯುತ ಮೊತ್ತ ಗಳಿಸಲು ಶಿಖರ್ ಧವನ್‌ ಕಾರಣರಾದರು. 66 ಎಸೆತಗಳಲ್ಲಿ ಅವರು 12 ಬೌಂಡರಿ, 5 ಸಿಕ್ಸರ್ ಸಿಡಿಸಿದರು. ಸನ್‌ರೈಸರ್ಸ್ ತಂಡದ ಮಧ್ಯಮವೇಗಿ ಭುವನೇಶ್ವರ್ ಕುಮಾರ್ ಇನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ಪ್ರಭಸಿಮ್ರನ್ ಸಿಂಗ್ ವಿಕೆಟ್ ಕಬಳಿಸಿದರು. ಎರಡನೇ ಓವರ್‌ನಲ್ಲಿ ಮಾರ್ಕೊ ಜೆನ್ಸನ್ ಎಸೆತದಲ್ಲಿ ಮ್ಯಾಥ್ಯೂ ಶಾಟ್ ಔಟಾದರು. ಒಂದು ಕಡೆ ವಿಕೆಟ್‌ಗಳು ಉರುಳುತ್ತಿದ್ದರೂ ಶಿಖರ್ ಧವನ್ ಬ್ಯಾಟ್ ಬೀಸುತ್ತಿದ್ದರು. ಎಲ್ಲ ಬೌಲರ್‌ಗಳನ್ನೂ ದಿಟ್ಟವಾಗಿ ಎದುರಿಸಿದರು. ಆರಂಭಿಕ ಬ್ಯಾಟರ್‌ ಆಗಿ ಕಣಕ್ಕಿಳಿದವರು ಕೊನೆಯ ಎಸೆತದವರೆಗೂ ಕ್ರೀಸ್‌ನಲ್ಲಿದ್ದು ದಾಖಲೆ ಬರೆದರು. ಶಿಖರ್ ಅವರನ್ನು ಬಿಟ್ಟರೆ ಸ್ಯಾಮ್ ಕರನ್ (22 ರನ್) ಅವರೊಬ್ಬರೇ ಎರಡಂಕಿ ಗಳಿಸಿದರು. ಸಂಕ್ಷಿಪ್ತ ಸ್ಕೋರು: ಪಂಜಾಬ್ ಕಿಂಗ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 143 (ಶಿಖರ್ ಧವನ್ ಔಟಾಗದೆ 99, ಸ್ಯಾಮ್ ಕರನ್ 22, ಮಯಂಕ್ ಮಾರ್ಕಂಡೆ 15ಕ್ಕೆ4, ಮಾರ್ಕೊ ಜೆನ್ಸೆನ್ 16ಕ್ಕೆ2, ಉಮ್ರಾನ್ ಮಲಿಕ್ 32ಕ್ಕೆ2). ಸನ್‌ರೈಸರ್ಸ್ ಹೈದರಾಬಾದ್‌: 17.1 ಓವರ್‌ಗಳಲ್ಲಿ 2 ವಿಕೆಟ್‌ಗೆ 145 (ಮಯಂಕ್ ಅಗರವಾಲ್‌ 21, ರಾಹುಲ್ ತ್ರಿಪಾಠಿ ಔಟಾಗದೆ 74, ಏಡನ್ ಮರ್ಕರಂ ಔಟಾಗದೆ 37; ಆರ್ಷದೀಪ್ ಸಿಂಗ್‌ 20ಕ್ಕೆ 1, ರಾಹುಲ್ ಚಾಹರ್ 28ಕ್ಕೆ 1). ಫಲಿತಾಂಶ: ಸನ್‌ರೈಸರ್ಸ್ ಹೈದರಾಬಾದ್‌ಗೆ 8 ವಿಕೆಟ್‌ಗಳ ಜಯ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.