2023 | ಬೆಂಗಳೂರಿಗೆ ರಾಹುಲ್‌ ಪಡೆ ಸವಾಲು ಬೆಂಗಳೂರು: ಸೋಮವಾರ ರಾತ್ರಿ ಬೆಂಗಳೂರಿನ ಕ್ರಿಕೆಟ್‌ ಅಭಿಮಾನಿಗಳಿಗೆ ‘ಡಬಲ್ ಮನರಂಜನೆ’ ಲಭಿಸಲಿದೆ. ಒಂದು ಕಡೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ಇನ್ನೊಂದು ಕಡೆ ಲಖನೌ ಸೂಪರ್‌ಜೈಂಟ್ಸ್ ತಂಡದ ನಾಯಕ, ಕನ್ನಡಿಗ ಕೆ.ಎಲ್. ರಾಹುಲ್ ಅವರ ಆಟವನ್ನು ಆಸ್ವಾದಿಸುವ ಅವಕಾಶ ಪ್ರೇಕ್ಷಕರಿಗೆ ಒದಗಿಬಂದಿದೆ. ಮೂರು ವರ್ಷಗಳ ನಂತರ ರಾಹುಲ್ ತಮ್ಮ ತವರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯವಾಡಲಿದ್ದಾರೆ. ಹೋದ ವರ್ಷದ ಆವೃತ್ತಿಯಲ್ಲಿ ಸೇರ್ಪಡೆಯಾಗಿದ್ದ ಲಖನೌ ತಂಡವು ಇದೇ ಮೊದಲ ಬಾರಿ ಉದ್ಯಾನನಗರಿಯಲ್ಲಿ ಕಣಕ್ಕಿಳಿಯಲಿದೆ. ಕಳೆದ ಬಾರಿ ರಾಹುಲ್ ಬಳಗವು ಕೋಲ್ಕತ್ತದ ಈಡನ್‌ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದಿದ್ದ ಎಲಿಮಿನೇಟರ್‌ ಪಂದ್ಯದಲ್ಲಿ ಆರ್‌ಸಿಬಿ ಎದುರು ಮಣಿದಿತ್ತು. ಆ ನಿರಾಶೆಗೆ ಮುಯ್ಯಿ ತೀರಿಸಿಕೊಳ್ಳುವ ಛಲದಲ್ಲಿ ಲಖನೌ ಇದೆ. ಎರಡು ಪಂದ್ಯಗಳನ್ನು ಆಡಿರುವ ಆರ್‌ಸಿಬಿ ಬೆಂಗಳೂರಿನಲ್ಲಿಯೇ ನಡೆದಿದ್ದ ಮುಂಬೈ ವಿರುದ್ಧದ ಮೊದಲ ಹಣಾಹಣಿಯಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಆದರೆ ಕೋಲ್ಕತ್ತದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಮುಗ್ಗರಿಸಿತ್ತು. ಆ ಪಂದ್ಯದಲ್ಲಿ ಎಡಗೈ ವೇಗಿ ಡೇವಿಡ್ ವಿಲಿ ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಗಳಿಸಿ ಆರ್‌ಸಿಬಿಗೆ ಆರಂಭದಲ್ಲಿಯೇ ಭರವಸೆ ಮೂಡಿದ್ದರು. ಆದರೆ, 11ನೇ ಓವರ್‌ ನಂತರ ಕೋಲ್ಕತ್ತ ತಂಡದ ಶಾರ್ದೂಲ್ ಠಾಕೂರ್ ಬ್ಯಾಟಿಂಗ್ ಅಬ್ಬರಕ್ಕೆ ಉಳಿದ ಬೌಲರ್‌ಗಳ ಲಯ ತಪ್ಪಿತು. 23 ಇತರೆ ರನ್‌ಗಳೂ ಹರಿದುಹೋದವು. ದೊಡ್ಡ ಮೊತ್ತದ ಗುರಿ ಬೆನ್ನಟ್ಟಿದ ತಂಡಕ್ಕೆ ಮಧ್ಯಮಕ್ರಮಾಂಕದ ಬ್ಯಾಟರ್‌ಗಳೂ ಕೈಕೊಟ್ಟಿದ್ದರು. ಸ್ಪಿನ್ ಬೌಲಿಂಗ್ ಮತ್ತು ಡೆತ್ ಓವರ್‌ಗಳಲ್ಲಿಯ ಆಟವನ್ನು ಸುಧಾರಣೆ ಮಾಡಿಕೊಳ್ಳದಿದ್ದರೆ ಆತಿಥೇಯ ತಂಡಕ್ಕೆ ಗೆಲುವಿನ ಹಾದಿ ಕಷ್ಟವಾಗಬಹುದು. ಆರಂಭಿಕ ಮುನ್ನಡೆಯನ್ನು ಬಳಸಿಕೊಂಡು ಪಂದ್ಯದ ಮೇಲೆ ಹಿಡಿತ ಸಾಧಿಸುವ ತಂತ್ರಗಾರಿಕೆಯಲ್ಲಿ ಫಫ್ ಡುಪ್ಲೆಸಿ ನಾಯಕತ್ವ ವಿಫಲವಾಯಿತು. ಆದರೆ ಲಖನೌ ತಂಡವು ಸನ್‌ರೈಸರ್ಸ್‌ ಎದುರಿನ ಪಂದ್ಯದಲ್ಲಿ ಇಂತಹದೇ ಸನ್ನಿವೇ ಶದಲ್ಲಿ ಯಶಸ್ವಿಯಾಗಿತ್ತು. 50 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಸನ್‌ರೈಸರ್ಸ್ ತಂಡವನ್ನು 121 ರನ್‌ಗಳ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ್ದ ರಾಹುಲ್ ಬಳಗವು ಪಂದ್ಯವನ್ನು ಜಯಿಸಿತ್ತು. ‘ಬ್ಯಾಟಿಂಗ್ ವೈಫಲ್ಯದ ಬಗ್ಗೆ ಬೆರಳು ತೋರಿಸುವುದು ಬಹಳ ಸುಲಭ. ಆದರೆ ನಮ್ಮ ಬೌಲಿಂಗ್ ಕಳಪೆಯಾಗಿತ್ತು. ಫೀಲ್ಡಿಂಗ್ ಕೂಡ ಚೆನ್ನಾಗಿರಲಿಲ್ಲ. ಪಂದ್ಯದ 40 ಓವರ್‌ಗಳಲ್ಲಿಯೂ ನಾವು ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ’ ಎಂದು ಆರ್‌ಸಿಬಿಯ ಬೌಲರ್ ಡೇವಿಡ್ ವಿಲಿ ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ಆದರೆ ತವರಿನ ಅಭಿಮಾನಿಗಳ ಎದುರು ಪುಟಿದೇಳುವ ಹುಮ್ಮಸ್ಸಿನಲ್ಲಿರುವ ಡುಪ್ಲೆಸಿ ಬಳಗವು ಲಖನೌಗೆ ಕಠಿಣ ಸವಾಲೊಡ್ಡುವ ನಿರೀಕ್ಷೆ ಇದೆ. ಭಾನುವಾರ ಸಂಜೆಯ ಹೊತ್ತಿಗೆ ಸಿದ್ಧವಾಗಿದ್ದ ಪಿಚ್‌ ಮೇಲ್ನೋಟಕ್ಕೆ ಸ್ಪರ್ಧಾತ್ಮಕವಾಗಿ ಕಂಡಿದೆ. ಪಂದ್ಯ ಆರಂಭ: ರಾತ್ರಿ 7.30 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ವಾಹಿನಿ, ಜಿಯೊ ಸಿನೆಮಾ ಆ್ಯಪ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.