ಅಂತರ ವಿಶ್ವವಿದ್ಯಾಲಯ ಮಹಿಳಾ ಕ್ರಿಕೆಟ್‌: ರೋಹ್ಟಕ್‌ ತಂಡಕ್ಕೆ ನಿರಾಸೆ ಮೈಸೂರು: ನಜ್ಮಾ ಸಿಡಿಸಿದ ಸುಂದರ ಅರ್ಧ ಶತಕ (65) ಹಾಗೂ ನಾಯಕಿ ಸೋನಾಲ್ (17ಕ್ಕೆ 3) ಅವರ ಮೊನಚಿನ ಬೌಲಿಂಗ್‌ ನೆರವಿನಿಂದ ಪಂಜಾಬ್‌ನ ಲವ್ಲಿ ಪ್ರೊಫೆಷನಲ್‌ ವಿಶ್ವವಿದ್ಯಾಲಯ ತಂಡವು ಅಂತರ ವಿಶ್ವವಿದ್ಯಾಲಯ ಮಹಿಳಾ ಕ್ರಿಕೆಟ್‌ ಟೂರ್ನಿಯ ಟ್ರೋಫಿ ಮುಡಿಗೇರಿಸಿಕೊಂಡಿತು. ಜಯಚಾಮರಾಜೇಂದ್ರ ಎಂಜಿನಿಯರಿಂಗ್‌ ಕಾಲೇಜಿನ ಕ್ರಿಕೆಟ್‌ ಮೈದಾನದಲ್ಲಿ ಮಂಗಳವಾರ ನಡೆದ ರೋಚಕ ಫೈನಲ್‌ನಲ್ಲಿ, ಪಂಜಾಬ್‌ ತಂಡವು ಹರಿಯಾಣದ ರೋಹ್ಟಕ್‌ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯ ತಂಡವನ್ನು 4 ವಿಕೆಟ್‌ಗಳಿಂದ ಮಣಿಸಿ ಚಾಂಪಿಯನ್‌ ಆಯಿತು. ಟೂರ್ನಿಯುದ್ದಕ್ಕೂ ಬೃಹತ್ ಮೊತ್ತ ಪೇರಿಸಿದ್ದ ರೋಹ್ಟಕ್‌ ತಂಡವು ಅಂತಿಮ ಘಟ್ಟದ ಪಂದ್ಯದಲ್ಲಿ 24.4 ಓವರ್‌ಗಳಲ್ಲಿ 126 ರನ್‌ ಗಳಿಸಿ ಅಲ್ಪಮೊತ್ತಕ್ಕೆ ಆಲೌಟ್‌ ಆಯಿತು. ಭಾವನಾ ಓಹ್ಲಾನ್ (55) ಮಾತ್ರ ಮಿಂಚಿದರು. ಅವರಿಗೆ ತನ್ನು (18), ವಂದನಾ (13) ಮಾತ್ರ ಸಾಥ್‌ ನೀಡಿದರು. ಉಳಿದವರು ಎರಡಂಕಿ ದಾಟಲಿಲ್ಲ. ಲವ್ಲಿ ವಿ.ವಿ ನಾಯಕಿ ಸೋನಾಲ್‌ ಅವರೊಂದಿಗೆ ಶಿವಾನಿ ಜಂಗೀದ್ (24ಕ್ಕೆ 2) ಶಿಸ್ತಿನ ಬೌಲಿಂಗ್‌ ದಾಳಿ ನಡೆಸಿ ಹರಿಯಾಣ ತಂಡವನ್ನು ಕಾಡಿದರು. ಗುರಿ ಬೆನ್ನಟ್ಟಿದ ಲವ್ಲಿ ಪ್ರೊಫೆಷನಲ್‌ ವಿಶ್ವವಿದ್ಯಾಲಯ ತಂಡವು ಆರಂಭದಲ್ಲೇ ಆಘಾತ ಅನುಭವಿಸಿತು. ದೀಪಿಕಾ ತಿವಾರಿ (9), ಶಿವಾನಿ ಕೃಷ್ಣ (0), ಸುಮನ್‌ (7) ಔಟಾದರು. 52ಕ್ಕೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡವನ್ನು ದೀಪಾ ಕುಮಾರಿ (25) ಅವರೊಂದಿಗೆ ತಾಳ್ಮೆಯ ಆಟವಾಡಿದ ನಜ್ಮಾ (65, 4X9) ಸೋಲಿನಿಂದ ಪಾರು ಮಾಡಿದರು. ತಂಡದ ಮೊತ್ತ 119 ರನ್‌ ಆಗಿದ್ದಾಗ ಇಬ್ಬರೂ ಔಟಾದರು. ಸಂಜನಾ ಹಾಗೂ ಶಿವಾನಿ ಜಂಗೀದ್ 24.1 ಓವರ್‌ಗಳಲ್ಲಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. 3ನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಅಮೃತಸರದ ಗುರುನಾನಕ್‌ ದೇವ್‌ ವಿಶ್ವವಿದ್ಯಾಲಯ ತಂಡವು 3 ವಿಕೆಟ್‌ಗಳಿಂದ ಮಹಾರಾಷ್ಟ್ರದ ಪುಣೆಯ ಸಾವಿತ್ರಿಬಾಯಿಫುಲೆ ವಿಶ್ವವಿದ್ಯಾಲಯ ವಿರುದ್ಧ ಗೆಲುವು ಸಾಧಿಸಿತು. ಪುಣೆ ತಂಡವು ಈಶ್ವರಿ ಸರ್ಕಾರ್‌ (54) ಹಾಗೂ ಪ್ರಿಯಾಂಕಾ ಘೋಡ್ಕೆ (ಅಜೇಯ 57) ಬ್ಯಾಟಿಂಗ್ ಬಲದಿಂದ 25 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 159ರನ್‌ ಗುರಿ ನೀಡಿತು. ಅಮೃತಸರ ತಂಡವು 24 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 161 ರನ್‌ ಗಳಿಸಿ ಜಯ ಸಾಧಿಸಿತು. ನೀತೂ ಸಿಂಗ್‌ ಅರ್ಧ ಶತಕ ಸಿಡಿಸಿ ಮಿಂಚಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.