: 2023| ಮುಂಬೈ ಇಂಡಿಯನ್ಸ್‌ಗೆ ಮೊದಲ ಜಯ: ಡೆಲ್ಲಿಗೆ ನಾಲ್ಕನೇ ಸೋಲು ನವದೆಹಲಿ (ಪಿಟಿಐ): ಕೊನೆಯ ಓವರ್‌ನಲ್ಲಿ ಒತ್ತಡವನ್ನು ಮೀರಿನಿಂತ ಮುಂಬೈ ಇಂಡಿಯನ್ಸ್ ತಂಡವು ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಮೊದಲ ಜಯದ ಸಿಹಿ ಸವಿಯಿತು. ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮುಂಬೈ 6 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿತು. ಡೆಲ್ಲಿಗೆ ಇದು ಸತತ ನಾಲ್ಕನೇ ಸೋಲು. ಟಾಸ್‌ ಗೆದ್ದ ಮುಂಬೈ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಡೆಲ್ಲಿ 19.4 ಓವರ್‌ಗಳಲ್ಲಿ 172 ರನ್‌ ಗಳಿಸಿ ಆಲೌಟ್‌ ಆಯಿತು. ಮುಂಬೈ ತಂಡವು 4 ವಿಕೆಟ್‌ ಕಳೆದುಕೊಂಡು ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ಗೆಲುವಿನ ದಡ ಸೇರಿತು. ಕೊನೆಯ ಓವರ್‌ ರೋಚಕತೆ: ಎನ್ರಿಚ್‌ ನಾಕಿಯಾ ಹಾಕಿದ ಕೊನೆಯ ಓವರ್‌ನಲ್ಲಿ ಮುಂಬೈ ತಂಡಕ್ಕೆ 5 ರನ್ ಬೇಕಿತ್ತು. ಮುಂಬೈ ತಂಡದ ಕೆಮರಾನ್‌ ಗ್ರೀನ್‌ ಮೊದಲ ಎಸೆತದಲ್ಲಿ 1 ರನ್ ಗಳಿಸಿದರು. ಎರಡು ಮತ್ತು ಮೂರನೇ ಎಸೆತಗಳನ್ನು ಆಡಿದ ಟಿಮ್ ಡೇವಿಡ್‌ ಅವರಿಂದ ರನ್ ದಾಖಲಾಗಲಿಲ್ಲ. ಎರಡನೇ ಎಸೆತದಲ್ಲಿ ಮುಕೇಶ್‌ ಅವರು ಡೇವಿಡ್‌ ಅವರ ಕ್ಯಾಚ್‌ ಚೆಲ್ಲಿದರು. ನಾಲ್ಕು ಮತ್ತು ಐದನೇ ಎಸೆತಗಳಲ್ಲಿ ಡೇವಿಡ್‌ ಹಾಗೂ ಗ್ರೀನ್ ತಲಾ ಒಂದು ರನ್ ಗಳಿಸಿದರು. ಕೊನೆಯ ಎಸೆತದಲ್ಲಿ ಡೇವಿಡ್‌ ಎರಡು ರನ್‌ ಗಳಿಸಿ ತಂಡವು ನಿಟ್ಟುಸಿರು ಬಿಡುವಂತೆ ಮಾಡಿದರು. ಇದಕ್ಕೂ ಮೊದಲು ನಾಯಕ ರೋಹಿತ್‌ ಶರ್ಮಾ (65) ಹಾಗೂ ಇಶಾನ್ ಕಿಶನ್‌ (31) ಮೊದಲ ವಿಕೆಟ್‌ ಜೊತೆಯಾಟದಲ್ಲಿ 71 ರನ್ ಸೇರಿಸಿ ಮುಂಬೈಗೆ ಉತ್ತಮ ಆರಂಭ ನೀಡಿದ್ದರು. ತಿಲಕ್‌ ವರ್ಮಾ (41) ಕೊಡುಗೆ ನೀಡಿದರು. ಟಿಮ್‌ ಡೇವಿಡ್‌ ಔಟಾಗದೆ 13 ಮತ್ತು ಗ್ರೀನ್‌ ಅಜೇಯ 17 ರನ್‌ ಗಳಿಸಿದರು. ಡೆಲ್ಲಿ ಸವಾಲಿನ ಮೊತ್ತ: ಅಕ್ಷರ್‌ ಪಟೇಲ್‌ ಮತ್ತು ನಾಯಕ ಡೇವಿಡ್‌ ವಾರ್ನರ್‌ ಅವರ ಅರ್ಧಶತಕಗಳ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಸವಾಲಿನ ಮೊತ್ತ ಕಲೆಹಾಕಿತ್ತು. ವಾರ್ನರ್‌ (51 ರನ್‌, 47 ಎ) ತಾಳ್ಮೆಯ ಆಟವಾಡಿ ಇನಿಂಗ್ಸ್‌ಗೆ ಬಲ ತುಂಬಿದರೆ, ಅಕ್ಷರ್‌ (54 ರನ್‌, 25 ಎ., 4X4, 6X5) ಬಿರುಸಿನ ಹೊಡೆತಗಳ ಮೂಲಕ ರನ್‌ ವೇಗ ಹೆಚ್ಚಿಸಿದರು. ಪೀಯೂಷ್‌ ಚಾವ್ಲಾ (22ಕ್ಕೆ 3) ಮತ್ತು ಜೇಸನ್‌ ಬೆಹ್ರೆನ್‌ಡಾರ್ಫ್‌ (23ಕ್ಕೆ 3) ಬಿಗುವಾದ ದಾಳಿ ನಡೆಸಿ, ಡೆಲ್ಲಿ ತಂಡ ಬೃಹತ್‌ ಮೊತ್ತ ಗಳಿಸದಂತೆ ನೋಡಿಕೊಂಡರು. ಇದಕ್ಕೂ ಮೊದಲು ಆರಂಭಿಕ ಆಟಗಾರ ಪೃಥ್ವಿ ಶಾ (15) ಮೂರು ಬೌಂಡರಿ ಹೊಡೆದರೂ ಹೆಚ್ಚು ಹೊತ್ತು ನಿಲ್ಲಲಿಲ್ಲ. ಹೃತಿಕ್‌ ಶೋಕೀನ್‌ ಎಸೆತದಲ್ಲಿ ಗ್ರೀನ್‌ ಅವರಿಗೆ ಕ್ಯಾಚಿತ್ತು ಔಟಾದರು. ಬಳಿಕ ಮನೀಷ್ ಪಾಂಡೆ (26) ಅವರು ವಾರ್ನರ್‌ ಜತೆ ಎರಡನೇ ವಿಕೆಟ್‌ಗೆ 43 ರನ್‌ ಸೇರಿಸಿದರು. ಚಾವ್ಲಾ ಬೌಲಿಂಗ್‌ನಲ್ಲಿ ಪಾಂಡೆ ಪೆವಿಲಿಯನ್‌ಗೆ ಮರಳಿದರು. ಆ ಬಳಿಕ ಬೆನ್ನುಬೆನ್ನಿಗೆ ಮೂರು ವಿಕೆಟ್‌ಗಳು ಬಿದ್ದವು. 13ನೇ ಓವರ್‌ನಲ್ಲಿ ಐದು ವಿಕೆಟ್‌ಗೆ 98 ರನ್‌ ಗಳಿಸಿ ಡೆಲ್ಲಿ ಕುಸಿತದ ಹಾದಿ ಹಿಡಿದಿತ್ತು. ಈ ವೇಳೆ ಅಕ್ಷರ್‌ ಬೀಸಾಟವಾಡಿದ್ದರಿಂದ ಇನಿಂಗ್ಸ್‌ಗೆ ಕಳೆ ಏರಿತು. ನಾಲ್ಕು ಬೌಂಡರಿ ಮತ್ತು ಐದು ಸಿಕ್ಸರ್‌ ಹೊಡೆದರು. ವಾರ್ನರ್‌ ಜತೆ 6ನೇ ವಿಕೆಟ್‌ಗೆ 67 ರನ್‌ ಸೇರಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.