ಐಪಿಎಲ್‌ 2023: ರಾಜಸ್ಥಾನ ರಾಯಲ್ಸ್‌ಗೆ ಚೆನ್ನೈ ಸೂಪರ್‌ ಕಿಂಗ್ಸ್ ಸವಾಲು ಚೆನ್ನೈ (ಪಿಟಿಐ): ರಾಜಸ್ಥಾನ ರಾಯಲ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಐಪಿಎಲ್‌ ಪಂದ್ಯದಲ್ಲಿ ಬುಧವಾರ ಇಲ್ಲಿ ಎದುರಾಗಲಿದ್ದು, ಎಲ್ಲರ ಚಿತ್ತ ರಾಯಲ್ಸ್‌ ತಂಡದ ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್‌ ಹಾಗೂ ಜೋಸ್‌ ಬಟ್ಲರ್ ಅವರ ಮೇಲೆ ನೆಟ್ಟಿದೆ. ಉತ್ತಮ ಲಯದಲ್ಲಿರುವ ಇಬ್ಬರಿಗೂ ಚೆಪಾಕ್‌ ಕ್ರೀಡಾಂಗಣದ ಪಿಚ್‌ನಲ್ಲಿ ‘ಸ್ಪಿನ್‌‘ ಪರೀಕ್ಷೆ ಎದುರಾಗಲಿದ್ದು, ಸೂಪರ್‌ಕಿಂಗ್ಸ್‌ ತಂಡದ ಸ್ಪಿನ್‌ ದಾಳಿಯನ್ನು ಎಷ್ಟರ ಮಟ್ಟಿಗೆ ಎದುರಿಸಿ ನಿಲ್ಲುವರು ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಹಿಂದಿನ ಪಂದ್ಯಗಳಲ್ಲಿ ರಾಯಲ್ಸ್‌ಗೆ ಬಿರುಸಿನ ಆರಂಭ ನೀಡಿದ್ದ ಜೈಸ್ವಾಲ್‌ ಮತ್ತು ಬಟ್ಲರ್‌ ತಲಾ ಎರಡು ಅರ್ಧಶತಗಳನ್ನು ಗಳಿಸಿದ್ದಾರೆ. ಇವರು ಕ್ರಮವಾಗಿ 164.47 ಹಾಗೂ 180.47ರ ಸ್ಟ್ರೈಕ್‌ರೇಟ್‌ ಹೊಂದಿದ್ದಾರೆ. ಆದರೆ ರಾಯಲ್ಸ್‌ ತಂಡ ತನ್ನ ಎಲ್ಲ ಮೂರೂ ಪಂದ್ಯಗಳನ್ನು ಬ್ಯಾಟರ್‌ಗಳಿಗೆ ನೆರವು ನೀಡುವ ಪಿಚ್‌ಗಳಲ್ಲಿ ಆಡಿತ್ತು. ಗುವಾಹಟಿ ಮತ್ತು ಹೈದರಾಬಾದ್‌ ಕ್ರೀಡಾಂಗಣದ ಪಿಚ್‌ ‘ಬ್ಯಾಟರ್‌ ಸ್ನೇಹಿ’ ಆಗಿತ್ತು. ಸ್ಪಿನ್ನರ್‌ಗಳಿಗೆ ನೆರವು ನೀಡುವ ಚೆನ್ನೈನ ಪಿಚ್‌ನಲ್ಲಿ ರಾಯಲ್ಸ್‌ ತಂಡದ ಬ್ಯಾಟರ್‌ಗಳಿಗೆ ನಿಜವಾದ ಸವಾಲು ಎದುರಾಗಲಿದೆ. ಸೂಪರ್‌ಕಿಂಗ್ಸ್‌ ತಂಡದ ಸ್ಪಿನ್‌ ವಿಭಾಗವು ಮೊಯೀನ್ ಅಲಿ, ರವೀಂದ್ರ ಜಡೇಜ ಮತ್ತು ಮಿಚೆಲ್ ಸ್ಯಾಂಟ್ನರ್‌ ಅವರನ್ನು ಒಳಗೊಂಡಿದೆ. ಈ ಮೂವರು ಇದುವರೆಗೆ ಒಟ್ಟು 11 ವಿಕೆಟ್‌ಗಳನ್ನು ತಮ್ಮೊಳಗೆ ಹಂಚಿಕೊಂಡಿದ್ದಾರೆ. ಮಾತ್ರವಲ್ಲ, ರನ್‌ ವೇಗಕ್ಕೆ ಲಗಾಮು ತೊಡಿಸುವಲ್ಲೂ ಯಶ ಕಂಡಿದ್ದಾರೆ. ಎರಡು ಪಂದ್ಯಗಳನ್ನು ಆಡಿರುವ ಮೊಯೀನ್‌ ಅವರ ಎಕಾನಮಿ ರೇಟ್‌ 6.50 ಆಗಿದೆ. ಜಡೇಜ (6.88) ಮತ್ತು ಸ್ಯಾಂಟನೆರ್‌ (6.75) ಅವರೂ ಓವರ್‌ನಲ್ಲಿ ಏಳಕ್ಕಿಂತ ಹೆಚ್ಚು ರನ್‌ ಬಿಟ್ಟುಕೊಟ್ಟಿಲ್ಲ. ಅನಾರೋಗ್ಯದ ಕಾರಣ ಕಳೆದ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಮೊಯೀನ್‌, ಮಂಗಳವಾರ ಕಣಕ್ಕಿಳಿಯಲಿದ್ದಾರೆ. ರಾಯಲ್ಸ್‌ ತಂಡ ಕೂಡಾ ಅತ್ಯುತ್ತಮ ಸ್ಪಿನ್ನರ್‌ಗಳನ್ನು ಹೊಂದಿರುವುರಿಂದ ಈ ಪಂದ್ಯದ ರೋಚಕತೆ ಹೆಚ್ಚಲಿದೆ. ಆರ್‌.ಅಶ್ವಿನ್‌ ಮತ್ತು ಯಜುವೇಂದ್ರ ಚಾಹಲ್‌ ಅವರು ಮಹೇಂದ್ರ ಸಿಂಗ್‌ ಧೋನಿ ಬಳಗವನ್ನು ಕಾಡಲು ಸಜ್ಜಾಗಿದ್ದಾರೆ. ಚೆಪಾಕ್‌ ಪಿಚ್‌ನ ಗುಣವನ್ನು ಚೆನ್ನಾಗಿ ಅರಿತುಕೊಂಡಿರುವ ಅಶ್ವಿನ್‌ಗೆ ಇದು ಒಂದು ರೀತಿಯಲ್ಲಿ ‘ತವರು’ ಪಂದ್ಯ ಆಗಿದೆ. ಚೆನ್ನೈ ತಂಡದ ದೀಪಕ್‌ ಚಾಹರ್‌ ಈ ಪಂದ್ಯದಲ್ಲಿ ಆಡುತ್ತಿಲ್ಲ. ತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿರುವ ಅವರು ಟೂರ್ನಿಯಿಂದಲೇ ಹೊರಬೀಳುವ ಸಾಧ್ಯತೆಯಿದೆ. ಧೋನಿ ಬಳಗವು ಬ್ಯಾಟಿಂಗ್‌ನಲ್ಲಿ ಋತುರಾಜ್‌ ಗಾಯಕವಾಡ್‌ ಮತ್ತು ಅಜಿಂಕ್ಯ ರಹಾನೆ ಅವರನ್ನು ನೆಚ್ಚಿ ಕೊಂಡಿದೆ. ಪಂದ್ಯ ಆರಂಭ: ರಾತ್ರಿ 7.30 ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿ, ಜಿಯೊ ಸಿನೆಮಾ ಆ್ಯಪ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.