ಫಫ್‌ ಡುಪ್ಲೆಸಿಗೆ ₹12 ಲಕ್ಷ ದಂಡ ಬೆಂಗಳೂರು (ಪಿಟಿಐ): ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಸೋಮವಾರ ನಡೆದಿದ್ದ ಐಪಿಎಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ನಿಧಾನಗತಿಯಲ್ಲಿ ಓವರುಗಳನ್ನು ಮಾಡಿದ್ದಕ್ಕೆ ನಾಯಕ ಫಫ್ ಡುಪ್ಲೆಸಿ ಅವರಿಗೆ ₹ 12 ಲಕ್ಷ ದಂಡ ವಿಧಿಸಲಾಗಿದೆ. 'ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ತನ್ನ ಪಾಲಿನ ಓವರುಗಳನ್ನು ಪೂರೈಸಲು ನಿಗದಿಗಿಂತಲೂ ಹೆಚ್ಚಿನ ಸಮಯ ತೆಗೆದುಕೊಂಡಿರುವುದು ಐಪಿಎಲ್‌ ನಿಯಮದ ಉಲ್ಲಂಘನೆಯಾಗಿದೆ. ಈ ಆವೃತ್ತಿಯಲ್ಲಿ ತಂಡದಿಂದ ಆಗಿರುವ ಮೊದಲ ಉಲ್ಲಂಘನೆ ಇದಾಗಿದ್ದು, ನಾಯಕ ಡುಪ್ಲೆಸಿ ಅವರಿಗೆ ₹ 12 ಲಕ್ಷ ದಂಡ ವಿಧಿಸಲಾಗಿದೆ’ ಎಂದು ಐಪಿಎಲ್‌ ಆಡಳಿತ ಸಮಿತಿ ಪ್ರಕಟಣೆ ತಿಳಿಸಿದೆ. ಆವೇಶ್‌ಗೆ ವಾಗ್ದಂಡನೆ: ಗೆಲುವಿನ ಸಂಭ್ರಮದಲ್ಲಿ ಹೆಲ್ಮೆಟ್‌ಅನ್ನು ಜೋರಾಗಿ ನೆಲಕ್ಕೆ ಎಸೆದಿದ್ದ ಲಖನೌ ತಂಡದ ವೇಗದ ಬೌಲರ್‌ ಆವೇಶ್‌ ಖಾನ್‌ ಅವರಿಗೆ ಪಂದ್ಯದ ರೆಫರಿ ಎಚ್ಚರಿಕೆ ನೀಡಿದ್ದಾರೆ. ‘ಆವೇಶ್‌ ತೋರಿದ ವರ್ತನೆಯು ಐಪಿಎಲ್‌ ನಿಯಮದಡಿ ಲೆವೆಲ್‌–1 ಅಪರಾಧವಾಗಿದೆ. ಅವರನ್ನು ವಾಗ್ದಂಡನೆಗೆ ಒಳಪಡಿಸಲಾಗಿದೆ’ ಎಂದು ಪ್ರಕಟಣೆ ಹೇಳಿದೆ. ಲೆವೆಲ್ –1 ಅಪರಾಧಗಳಿಗೆ ಸಂಬಂಧಿಸಿದಂತೆ ಪಂದ್ಯದ ರೆಫರಿ ನೀಡುವ ತೀರ್ಪು ಅಂತಿಮವಾಗಿದೆ. ರಾಹುಲ್‌ ಸಮರ್ಥನೆ: ಸೋಮವಾರದ ಪಂದ್ಯದಲ್ಲಿ ತಾವು ತುಂಬಾ ನಿಧಾನಗತಿಯಲ್ಲಿ ಬ್ಯಾಟಿಂಗ್‌ ಮಾಡಿದ್ದನ್ನು ಲಖನೌ ತಂಡದ ನಾಯಕ ಕೆ.ಎಲ್‌.ರಾಹುಲ್‌ ಅವರು ಸಮರ್ಥಿಸಿಕೊಂಡಿದ್ದಾರೆ. ಕೊನೆಯ ಎಸೆತದವರೆಗೂ ಕುತೂಹಲ ಕೆರಳಿಸಿದ್ದ ಪಂದ್ಯವನ್ನು ಲಖನೌ ತಂಡ ಒಂದು ವಿಕೆಟ್‌ನಿಂದ ಗೆದ್ದಿತ್ತು. ಆರ್‌ಸಿಬಿ ನೀಡಿದ್ದ 213 ರನ್‌ಗಳ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾಗಿತ್ತು. ಸವಾಲಿ ಮೊತ್ತ ಮುಂದಿದ್ದರೂ, ತಾಳ್ಮೆಯಿಂದ ಆಡಿದ್ದ ರಾಹುಲ್‌ 20 ಎಸೆತಗಳಲ್ಲಿ 18 ರನ್ ಗಳಿಸಿದ್ದರು. ‘ಪಂದ್ಯದ ಪರಿಸ್ಥಿತಿಯನ್ನು ನೋಡಿಕೊಂಡು ಬ್ಯಾಟ್‌ ಮಾಡಿದೆ. ನನ್ನ ನಿರ್ಧಾರ ಸರಿಯಾಗಿಯೇ ಇತ್ತು. ಮುಂದಿನ ಪಂದ್ಯಗಳಲ್ಲಿ ಒಂದೆರಡು ಅಬ್ಬರದ ಇನಿಂಗ್ಸ್‌ ಆಡಿದರೆ ನನ್ನ ಸ್ಟ್ರೈಕ್‌ರೇಟ್‌ ಉತ್ತಮಗೊಳ್ಳುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ. ರಾಹುಲ್‌ ನಿಧಾನಗತಿಯಲ್ಲಿ ಆಡಿದ್ದರಿಂದ ಇತರ ಬ್ಯಾಟ್ಸ್‌ಮನ್‌ಗಳ ಮೇಲಿನ ಒತ್ತಡ ಹೆಚ್ಚಿತ್ತು. ನಿಕೊಲಸ್‌ ಪೂರನ್‌ (62 ರನ್‌, 19ಎ.) ಮತ್ತು ಮಾರ್ಕಸ್‌ ಸ್ಟೊಯಿನಿಸ್‌ (65 ರನ್‌, 30 ಎ.) ಅಬ್ಬರದ ಆಟದಿಂದಾಗಿ ತಂಡ ಗೆದ್ದಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.