ಕ್ರಿಕೆಟ್‌ ಆಡಿದ್ದಕ್ಕೆ ಏಟು ತಿಂದಿದ್ದೆ! ಕಷ್ಟದ ದಿನಗಳ ಬಿಚ್ಚಿಟ್ಟ ಬೆಂಗಳೂರು: ಕ್ರಿಕೆಟಿಗನಾಗಬೇಕೆಂಬ ಬಯಕೆ ಈಡೇರಿಸುವ ಹಾದಿಯಲ್ಲಿ ಮನೆಯವರಿಂದ ಸೂಕ್ತ ಬೆಂಬಲ ಸಿಗಲಿಲ್ಲ. ನಾನು ಕ್ರಿಕೆಟ್ ಆಡುವುದು ಅಪ್ಪನಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಕ್ರಿಕೆಟ್‌ ಆಡಿದ್ದಕ್ಕೆ ಅಪ್ಪನಿಂದ ಹಲವು ಸಲ ಏಟುಗಳನ್ನು ತಿಂದಿದ್ದೆ... ಐಪಿಎಲ್‌ ಪಂದ್ಯದ ಕೊನೆಯ ಓವರ್‌ನಲ್ಲಿ ಐದು ಸಿಕ್ಸರ್‌ ಹೊಡೆದು ‘ಹೀರೊ’ ಆಗಿರುವ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದ ರಿಂಕು ಸಿಂಗ್‌ ಅವರು ಬಾಲ್ಯದಲ್ಲಿ ಎದುರಿಸಿದ್ದ ಬವಣೆಯನ್ನು ಹೀಗೆ ಬಿಚ್ಚಿಟ್ಟಿದ್ದಾರೆ. ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಆಕಾಶ್‌ ಚೋಪ್ರಾ ಅವರು ಜಿಯೊಸಿನೆಮಾದಲ್ಲಿ ಆಯೋಜಿಸುವ ‘ಆಕಾಶ್‌ವಾಣಿ’ ಕಾರ್ಯಕ್ರಮದಲ್ಲಿ ರಿಂಕು ಮುಕ್ತವಾಗಿ ಮಾತನಾಡಿದರು. ‘ಹಾಸ್ಟೆಲ್‌ನ ಟೂರ್ನಿಯಲ್ಲಿ ಪಾಲ್ಗೊಳ್ಳಲು ಒಮ್ಮೆ ಕಾನ್ಪುರಕ್ಕೆ ಹೋಗಿದ್ದೆ. ಖರ್ಚಿಗಾಗಿ ಅಮ್ಮ ₹ 1,000 ಕೊಟ್ಟಿದ್ದರು. ಆದರೆ ಅಪ್ಪನಿಂದ ಏಟು ಮಾತ್ರ ಸಿಕ್ಕಿತ್ತು’ ಎಂದು ಅಲೀಗಢದಲ್ಲಿ ಜನಿಸಿದ ರಿಂಕು ಹೇಳಿದರು. ‘ನನ್ನ ಸಹೋದರ ಕೋಚಿಂಗ್‌ ಸೆಂಟರ್‌ವೊಂದರಲ್ಲಿ ನೆಲ ಒರೆಸುವ ಕೆಲಸ ಮಾಡುತ್ತಿದ್ದ. ನನ್ನನ್ನೂ ಅಲ್ಲಿ ಕೆಲಸ ಮಾಡಲು ಕರೆದೊಯ್ಯುತ್ತಿದ್ದ. ಬೆಳಿಗ್ಗೆ ಬೇಗನೇ ಬಂದು ನೆಲ ಒರೆಸಿ ಹೋದರೆ ಯಾರಿಗೂ ತಿಳಿಯದು ಎನ್ನುತ್ತಿದ್ದ. ಆದರೆ ನನಗೆ ಆ ಕೆಲಸ ಇಷ್ಟವೇ ಇರಲಿಲ್ಲ. ಕ್ರಿಕೆಟ್‌ನತ್ತ ಗಮನ ಕೇಂದ್ರೀಕರಿಸತೊಡಗಿದೆ’ ಎಂದು ಮೆಲುಕು ಹಾಕಿಕೊಂಡರು. ‘2012ರಲ್ಲಿ ಅಂತರರಾಷ್ಟ್ರೀಯ ಮಟ್ಟದ ಶಾಲಾ ಟೂರ್ನಿಯೊಂದರಲ್ಲಿ ಡೆಲ್ಲಿ ಪಬ್ಲಿಕ್‌ ಸ್ಕೂಲ್‌ ತಂಡವನ್ನು ಪ್ರತಿನಿಧಿಸುವ ಅವಕಾಶ ಲಭಿಸಿತ್ತು. ಪಾಕಿಸ್ತಾನ, ಶ್ರೀಲಂಕಾ, ದುಬೈ ಮತ್ತು ಬಾಂಗ್ಲಾದೇಶದಿಂದ ತಂಡಗಳು ಬಂದಿದ್ದವು. ಟೂರ್ನಿಯ ಶ್ರೇಷ್ಠ ಆಟಗಾರನಾದ ನನಗೆ ಬಹುಮಾನವಾಗಿ ಬೈಕ್ ದೊರೆತಿತ್ತು. ಆ ಸಾಧನೆ ವೃತ್ತಿಜೀವನಕ್ಕೆ ತಿರುವು ನೀಡಿತು. ಆ ಬಳಿಕ ಅಪ್ಪನ ಬೆಂಬಲವೂ ಲಭಿಸತೊಡಗಿತು’ ಎಂದರು. ‘ಐಪಿಎಲ್‌ ಹರಾಜಿನಲ್ಲಿ ನನಗೆ ಅಷ್ಟೊಂದು ಮೌಲ್ಯ ದೊರೆಯಬಹುದು ಅಂದುಕೊಂಡಿರಲಿಲ್ಲ. ₹ 20–25 ಲಕ್ಷಕ್ಕೆ ಮುಂಬೈ ತಂಡದ ಪಾಲಾಗಬಹುದು ಅಂದುಕೊಂಡಿದ್ದೆ. ಆದರೆ ಹರಾಜಿನಲ್ಲಿ ನನ್ನ ಬೆಲೆ ಏರುತ್ತಲೇ ಹೋಯಿತು. ಅಂತಿಮವಾಗಿ ₹ 80 ಲಕ್ಷಕ್ಕೆ ಕೆಕೆಆರ್‌ ತಂಡವನ್ನು ಸೇರಿಕೊಂಡೆ’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.