ಏಷ್ಯಾ ಕಪ್‌ ಪಾಕ್‌ನಲ್ಲಿ ನಡೆಯದಿದ್ದರೆ ₹ 25 ಕೋಟಿ ಆದಾಯ ನಷ್ಟ: ಸೇಥಿ ಕರಾಚಿ: ಈ ವರ್ಷ ನಡೆಯಲಿರುವ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಭಾಗವಹಿಸಲು ನಿರಾಕರಿಸಿದರೆ ಆದಾಯ ರೂಪದಲ್ಲಿ ಬರುವ ₹ 25 ಕೋಟಿಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜಾಂ ಸೇಥಿ ಹೇಳಿದ್ದಾರೆ. ಈಗಾಗಲೇ ಏಷ್ಯಾ ಕಪ್ ಪಾಕಿಸ್ತಾನದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದ್ದು, ಇದರಿಂದ ಪಾಕ್ ಹಿಂದೆಸರಿದರೆ ಉಂಟಾಗಲಿರುವ ನಷ್ಟವನ್ನು ಭರಿಸಲು ಸಿದ್ಧವಾಗಬೇಕಾಗುತ್ತದೆ‘ ಎಂದು ಸೇಥಿ ತಿಳಿಸಿದರು. ಈ ಟೂರ್ನಿಯನ್ನು ‘ಹೈಬ್ರಿಡ್ ಮಾದರಿ‘ಯಲ್ಲಿ ನಡೆಸಲು ನಾವು ಕೋರಿಕೊಂಡಿದ್ದೇವೆ. ಭಾರತ ಆಡುವ ಎಲ್ಲಾ ಪಂದ್ಯಗಳನ್ನು ದುಬೈಯಲ್ಲಿ ಆಯೋಜಿಸುತ್ತೇವೆ. ಉಳಿದ ಎಲ್ಲಾ ತಂಡಗಳ ಪಂದ್ಯ ಪಾಕ್ ನೆಲದಲ್ಲೇ ನಡೆಸಲಾಗುವುದು ಎಂದು ಹೇಳಿದ್ದೇವೆ. ಇದರ ಹೊರತಾಗಿ ನಾವು ವೇಳಾಪಟ್ಟಿಯನ್ನು ಬದಲಾಯಿಸಲು ಸಾಧ್ಯವಾಗದು ಎಂದು ವಿವರಿಸಿದರು. ಸಪ್ಟೆಂಬರ್‌ನಲ್ಲಿ ಏಷ್ಯಾ ಕಪ್ ಟೂರ್ನಿ ನಡೆಯಲಿದ್ದು, ಪಾಕಿಸ್ತಾನದ ನೆಲದಲ್ಲಿ ಆಡಲು ಭಾರತ ಕ್ರಿಕೆಟ್ ತಂಡ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ. ‘ಪಾಕಿಸ್ತಾನ ಈ ಟೂರ್ನಿಯ ಆಯೋಜನೆಯ ಹಕ್ಕನ್ನು ಕಳೆದುಕೊಳ್ಳಲು ಬಯಸುವುದಿಲ್ಲ‘ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು (ಐಸಿಸಿ) ಉದ್ದೇಶಿಸಿ ಸೇಥಿ ಅವರು ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.